ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ತವನಪ್ಪ-ಅಮೃತ ಒಟ್ಟಾಗಿ ಚುನಾವಣೆ ನಡೆಸಿದರೆ ಬಿಜೆಪಿಗೆ ಮತ್ತೆ ಗೆಲುವು?

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಈ ಬಾರಿಯ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಅಭ್ಯರ್ಥಿಗಳ ದಂಡು ತೀವ್ರ ಲಾಬಿ ನಡೆಸಿದೆ.

ಹೌದು! ಈ ಬಾರಿಯೂ ಹಾಲಿ ಶಾಸಕ ಅಮೃತ ದೇಸಾಯಿ ಅವರಿಗೇ ಬಿಜೆಪಿ ಟಿಕೆಟ್ ಪಕ್ಕಾ ಎನ್ನುತ್ತಿರುವಾಗಲೇ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿಯಲ್ಲಿ ಅಭ್ಯರ್ಥಿಗಳ ದಂಡೇ ಹುಟ್ಟಿಕೊಂಡಿದೆ. ಮಾಜಿ ಶಾಸಕಿ ಸೀಮಾ ಮಸೂತಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತವನಪ್ಪ ಅಷ್ಟಗಿ, ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹಾಗೂ ಈ ಹಿಂದೆ ಇದೇ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಕೂಡ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಆದರೆ, ವಾಸ್ತವ ಸ್ಥಿತಿ ಹಾಗಿಲ್ಲ. ಈ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಕಟ್ಟಿಟ್ಟ ಬುತ್ತಿ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್ ಸಿಕ್ಕರೆ ಅವರೇ ಗೆಲುವು ಸಾಧಿಸಲಿದ್ದಾರೆ. ಒಂದು ವೇಳೆ ಅವರಿಗೆ ಟಿಕೆಟ್ ಸಿಗದೇ ಇದ್ದರೆ, ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಅವರಿಗೆ ಟಿಕೆಟ್ ಸಿಕ್ಕರೂ ಅವರೇ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಾತ್ರ ಗೆಲುವು ಸಾಧಿಸುವುದಿಲ್ಲ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಆದರೆ, ತವನಪ್ಪ ಅಷ್ಟಗಿ ಮತ್ತು ಹಾಲಿ ಶಾಸಕ ಅಮೃತ ದೇಸಾಯಿ ಮತ್ತೆ ಒಂದಾಗಿ ಚುನಾವಣೆ ನಡೆಸಿದ್ದೇ ಆದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಮತ್ತೂ ಕಷ್ಟ ಎಂದೇ ಹೇಳಲಾಗುತ್ತಿದೆ. ತವನಪ್ಪ ಅಷ್ಟಗಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಕ್ಷೇತ್ರದಿಂದ ಸುಮಾರು 25 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಶಕ್ತಿಯನ್ನು ಅವರು ಹೊಂದಿದ್ದಾರೆ. ಇನ್ನು ಅಮೃತ ದೇಸಾಯಿ ಕೂಡ ವೈಯಕ್ತಿಕವಾಗಿ ಸುಮಾರು 40 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಶಕ್ತಿ ಹೊಂದಿದ್ದಾರೆ. ಒಂದು ವೇಳೆ ಈ ಇಬ್ಬರೂ ನಾಯಕರು ಸೇರಿ ಚುನಾವಣೆ ಎದುರಿಸಿದ್ದೇ ಆದಲ್ಲಿ ಮತ್ತೆ ಗ್ರಾಮೀಣ ಕ್ಷೇತ್ರದಲ್ಲಿ ಕಮಲ ಅರಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಿದ್ದಾರೆ ರಾಜಕೀಯ ಮುತ್ಸದ್ದಿಗಳು.

ಏನೇ ಆಗಲಿ ಈ ಬಾರಿಯ ವಿಧಾನಸಭೆ ಚುನಾವಣೆ ತೀವ್ರ ರಂಗೇರಲಿದ್ದು, ಬಿಜೆಪಿ ನಾಯಕರು ಟಿಕೆಟ್ ಆಕಾಂಕ್ಷಿಗಳನ್ನು ಸಮಾಧಾನ ಮಾಡಿ ಯಾರಿಗೆ ಟಿಕೆಟ್ ನೀಡುತ್ತಾರೆ ಎಂಬುದೇ ತೀವ್ರ ಕುತೂಹಲದ ಸಂಗತಿಯಾಗಿದೆ. ಬಸವರಾಜ ಕೊರವರ ಅವರು ಪಕ್ಷೇತರ ಅಭ್ಯರ್ಥಿಯಾಗಿಯೂ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಒಂದು ವೇಳೆ ಅಮೃತ ದೇಸಾಯಿ ಅವರಿಗೇ ಈ ಬಾರಿಯೂ ಟಿಕೆಟ್ ನೀಡಿದ್ದೇ ಆದಲ್ಲಿ ಇತ್ತ ಬಿಜೆಪಿಯವರೇ ಆದ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ ಹಾಗೂ ತವನಪ್ಪ ಅಷ್ಟಗಿ ಅವರಿಗೆ ಬಿಜೆಪಿ ನಾಯಕರು ಯಾವ ಭರವಸೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Edited By : Nagaraj Tulugeri
Kshetra Samachara

Kshetra Samachara

02/08/2022 10:49 am

Cinque Terre

14.59 K

Cinque Terre

45

ಸಂಬಂಧಿತ ಸುದ್ದಿ