ಧಾರವಾಡ: ಸಿದ್ದರಾಮೋತ್ಸವ ಜನಪರವಲ್ಲದ ಉತ್ಸವ ಅಲ್ಲವೇ ಅಲ್ಲ. ತಮ್ಮ ಅಸ್ತಿತ್ವಕ್ಕಾಗಿ ಈ ಉತ್ಸವ ಮಾಡಿಕೊಳ್ಳುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವದಿಂದ ಜನರಿಗೆ ಯಾವುದೇ ಲಾಭವಿಲ್ಲ. ಅವರು ತಮ್ಮ ಅಸ್ತಿತ್ವ ತೋರಿಸುವುದಕ್ಕಾಗಿ ಈ ಉತ್ಸವ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದರು.
ಆರ್‌ಎಸ್‌ಎಸ್ ಒಂದು ಸುಳ್ಳು ಸಂಘ ಎಂಬ ಹೇಳಿಕೆ ಕೊಟ್ಟ ಪ್ರೊ.ಕೆ.ಎಸ್.ಭಾಗವಾನ್ ಅವರಿಗೆ ತಿರುಗೇಟು ನೀಡಿದ ಸಚಿವರು, ಒಬ್ಬ ವ್ಯಕ್ತಿಯ ಬೆಳವಣಿಗೆ ಸಹಿಸಲಾರದ ವ್ಯಕ್ತಿ, ಬಾಯಿಗೆ ಬಂದಂತೆ ಮಾತನಾಡುವುದು ಹಾಗೂ ತಮ್ಮ ವ್ಯಕ್ತಿತ್ವ, ವಿಚಾರಗಳನ್ನು ಹೊರ ಹಾಕುವ ಕೆಲಸ ಮಾಡುತ್ತಾನೆ. ಅದಕ್ಕೆ ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇಲ್ಲ ಎಂದರು.
ಸಿಎಂ ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಅಧಿಕಾರ ಸ್ವೀಕಾರ ಸಮಾರಂಭಕ್ಕಾಗಿ ಸಿಎಂ ದೆಹಲಿಗೆ ಹೋಗಿದ್ದಾರೆ. ಸಂಪುಟ ವಿಸ್ತರಣೆಗೆ ಹೋಗಿಲ್ಲ. ಆ ಪ್ರಸಂಗ ಬಂದರೆ ದೆಹಲಿ ವರಿಷ್ಠರೇ ಸಿಎಂ ಅವರನ್ನು ಕರೆಯುತ್ತಾರೆ ಎಂದರು.
ಬೇಬಿ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಲ್ಲಿನ ಜನ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿದೆ. ಆದರೆ, ತಜ್ಞರು ಬಂದು ಅಲ್ಲಿ ಪರೀಕ್ಷೆ ಮಾಡಲಿದ್ದಾರೆ. ಆ ಮೇಲೆ ಗಣಿಗಾರಿಕೆ ಮಾಡಬೇಕೋ ಬೇಡವೋ ಎಂದು ತೀರ್ಮಾನಿಸಲಾಗುತ್ತದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/07/2022 03:42 pm