ಹುಬ್ಬಳ್ಳಿ: ದೇಶಾದ್ಯಂತ ಖಾದಿ ಗ್ರಾಮೋದ್ಯೋಗದಲ್ಲಿ ಒಂದು ಕೋಟಿ 60 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಸದ್ಯ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವ ಮಾಡುತ್ತಿದ್ದೇವೆ. ಸರ್ಕಾರ ಎರಡು ವರ್ಷಗಳಿಂದ ಈ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿತ್ತು. ಈಗ ಮನೆ ಮನೆಗೆ ರಾಷ್ಟ್ರಧ್ವಜ ಕೊಡಬೇಕೆಂದು ಹೊರಟಿದ್ದಾರೆ ಬಹಳ ಸಂತೋಷ. ಆದ್ರೆ ಬೇರೆ ದೇಶದಿಂದ ಇವರು ರಾಷ್ಟ್ರಧ್ವಜವನ್ನು ತರಿಸುತ್ತಿದ್ದಾರೆ ಎಂಬುದು ನಮ್ಮಲ್ಲಿ ಅಸಮಾಧಾನ ಮೂಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದರು.
ನಗರದಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಿಜೆಪಿಯವರು ರಾಷ್ಟ್ರಧ್ವಜವನ್ನು ತಯಾರಿಸಲು ಇವರಿಗೆ ಕೊಟ್ಟಿದ್ದರೆ ಮಾಡುತ್ತಿರಲಿಲ್ಲವೇ. ಸದ್ಯ ಖಾದಿ ಗ್ರಾಮೋದ್ಯೋಗದಲ್ಲಿನ ಕಾರ್ಮಿಕರು ಕೇವಲ 5000 ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಅವಧಿ ಮೀರಿಯೂ ಕೆಲಸ ಮಾಡ್ತಿದ್ದಾರೆ. ರಾಷ್ಟ್ರ ಧ್ವಜವನ್ನು ತಯಾರಿಸಲು ನಮ್ಮವರಿಗೆ ಕೊಟ್ಟಿದ್ದರೆ ಅವರಿಗೂ ದುಡಿಮೆ ಆಗುತ್ತಿತ್ತಲ್ವಾ. ಅದನ್ನು ಬಿಟ್ಟು ಬೇರೊಂದು ಖಾಸಗಿ ಕಂಪನಿಗೆ ನೀಡಿರುವುದು ಖಂಡನೀಯ ಎಂದು ಡಿಕೆಶಿ ಹೇಳಿದ್ದಾರೆ.
ಇವರಿಗೆ ಸರ್ಕಾರನೇ ರೇಟ್ ಕೊಟ್ಟಿದೆ. ಇಲ್ಲಿನ ಬಟ್ಟೆ ಮತ್ತು ಹತ್ತಿಗೆ ಸರಕಾರವೇ ದರ ನಿಗದಿ ಮಾಡಿದೆ. ಎರಡು ವರ್ಷದಿಂದ ಇವರಿಗೆ ಹೇಳಿದ್ದರೆ ಇಡೀ ದೇಶಕ್ಕಾಗುವಷ್ಟು ಧ್ವಜ ತಯಾರಿಸಿ ಕೊಡುತ್ತಿದ್ದರು. ಈಗ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಅಂತ ಹೇಳ್ತಿದ್ದಾರೆ. ಇದನ್ನು ಯಾಕೆ ಚೀನಾದಿಂದ ಧ್ವಜ ತರಿಸುತ್ತಿದ್ದೀರಿ?. ನೀವು ಯಾವುದೇ ಬಟ್ಟೆ ಕೊಟ್ಟಿದ್ದರೂ ಇವರೆ ತಯಾರಿ ಮಾಡಿ ಕೊಡ್ತಿದ್ದರು. ಗಾಂಧಿ ಚರಕವೇ ನಮ್ಮ ದೇಶದ ಆಸ್ತಿ. ನಮ್ಮ ಜನಕ್ಕೆ ಒಂದು ಉದ್ಯೋಗ ಕೊಡಬೇಕೆಂದು ಬುನಾದಿ ಹಾಕಿದ್ದವರು. ಅದನ್ನು ಇವರು ಮುಚ್ಚುತ್ತಿದ್ದಾರೆ. ಹೀಗೆ ಮಾಡ್ತಿರೋದು ಸರಿ ಅಲ್ಲಾ. ರಾಹುಲ್ ಗಾಂಧಿ ಅವರು ದೇಶಾದ್ಯಂತ ಖಾದಿ ಗ್ರಾಮೋದ್ಯೋಗ ಎಲ್ಲಿ ಮಾಡ್ತಿದ್ದಾರೋ ಅಲ್ಲಿಗೆ ಬಂದು ಭೇಟಿ ನೀಡಲು ಮುಂದಾಗುತ್ತಿದ್ದಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/07/2022 05:56 pm