ಅಳ್ನಾವರ: ತಾಲೂಕಿನ ವ್ಯಾಪ್ತಿಯ ನಾಲ್ಕು ಗ್ರಾ.ಪಂ ಎಲ್ಲ ಸದಸ್ಯರು,ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅರವಟಗಿಯ ಸಿದ್ಧಾರೂಢ ಮಠದಲ್ಲಿ ಸಭೆ ನಡೆಸಿ ತಾಲೂಕು ಮಟ್ಟದ ಗ್ರಾ.ಪಂ ಸದಸ್ಯರ ಒಕ್ಕೂಟ ರಚನೆ ಮಾಡಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅರವಟಗಿ, ಕಡಬಗಟ್ಟಿ, ಬೆನಚಿ ಹಾಗೂ ಹೊನ್ನಾಪುರ ಗ್ರಾ.ಪಂ.ಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘಟನೆಯಿಂದ ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ಕಾರದ ಸವಲತ್ತು ಪಡೆಯಲು ಸಹಕಾರಿಯಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಲ್ಲಪ್ಪ ಹೊಂಗಲ ಹಾಗೂ ಸ್ಮಿತಾ ಸಾವಂತ ಹೇಳಿದರು.
ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಜೋಡಟ್ಟಿ ಮಾತನಾಡಿ ಗ್ರಾ.ಪಂ ಸದಸ್ಯರು ಯಾವುದೇ ಪಕ್ಷದಡಿಯಲ್ಲಿ ಆಯ್ಕೆಯಾಗಿ ಬರುವುದಿಲ್ಲ, ನಮ್ಮದು ಪಕ್ಷಾತೀತ ಸಂಘಟನೆ. ಗ್ರಾಮದ ಅಭಿವೃದ್ಧಿಯತ್ತ ಗಮನ ಹರಿಸಿ,ಅಭಿವೃದ್ಧಿ ಪರ ಪ್ರಜೆಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಬರುವ ದಿನಗಳಲ್ಲಿ ಗ್ರಾ.ಪಂ ಸದಸ್ಯರ ಬೇಡಿಕೆ ಹಾಗೂ ಕುಂದು ಕೊರತೆಗಳನ್ನು ನೀಗಿಸಲು ಅನುಕೂಲವಾಗುತ್ತದೆ ಎಂದು ಸರ್ವ ಸದಸ್ಯರು ಅಭಿಪ್ರಾಯ ಪಟ್ಟರು.
Kshetra Samachara
30/06/2022 07:44 pm