ಹುಬ್ಬಳ್ಳಿ: ಬಿಜೆಪಿ ಸರ್ಕಾರ ಪಠ್ಯಪುಸ್ತಕದಲ್ಲಿ ಅನೇಕ ಮಹನೀಯರ ಇತಿಹಾಸವನ್ನು ತಿರುಚಿ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದೆ. ಕೂಡಲೇ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕದಲ್ಲಿ ಬಿಜೆಪಿ ಸರ್ಕಾರ ಪರಿಷ್ಕರಣೆ ಹೆಸರಿನಲ್ಲಿ ಅನಾಹುತ ಮಾಡಿದೆ. ರೋಹಿತ್ ಚಕ್ರತೀರ್ಥ ಒಬ್ಬ ಮನೆ ಪಾಠ ಹೇಳುವ ವ್ಯಕ್ತಿ. ಅವನನ್ನು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿ ಮಾಡಿ ಇತಿಹಾಸ ತಿರುಚುವ ಕೆಲಸ ಮಾಡಿದೆ. ಪಠ್ಯದಲ್ಲಿ ಧಾರ್ಮಿಕತೆ, ಜಾತಿಯ ವಿಷಬೀಜ ಬಿತ್ತುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಪಠ್ಯ ಪರಿಷ್ಕರಣೆಯಿಂದ ಬಿಜೆಪಿ ಸರ್ಕಾರ ರಾಜ್ಯದ 1 ಕೋಟಿ 30 ಲಕ್ಷ ಮಕ್ಕಳ ಭವಿಷ್ಯ ನಾಶ ಮಾಡಲು ಹೊರಟ್ಟಿದ್ದಾರೆ. ಕುವೆಂಪು, ಭಗತ್ ಸಿಂಗ್ ಸೇರಿದಂತೆ ನಾನಾ ನಾಯಕರ ಇತಿಹಾಸ ತಿರುಚುವ ಕೆಲಸ ಅಕ್ಷಮ್ಯ ಅಪರಾಧ. ಈವರೆಗೆ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಲ್ಲ. ಇವರ ದುರಾಡಳಿತದಿಂದ ರಾಜ್ಯದ ಏಳುವರೆ ಕೋಟಿ ಜನರು ರೋಸಿ ಹೋಗಿದ್ದಾರೆ ಎಂದು ಹರಿಹಾಯ್ದರು.
ಇನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಹಾಗೇ ಪ್ರಮೋದ ಮುತಾಲಿಕ್ ಪ್ರಚೋದನಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾರು ಧರ್ಮಗಳ ನಡುವೆ ಜಗಳ ಹಚ್ಚುತ್ತಾರೋ ಅವರ ಹೆಡೆಮುರಿ ಕಟ್ಟುವಂತ ಕೆಲಸಕ್ಕೆ ಈ ಸರ್ಕಾರ ಕೈ ಹಾಕಬೇಕಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/06/2022 11:42 am