ಧಾರವಾಡ: ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಶಿಕ್ಷಕರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡಿದೆ. ಆದ್ದರಿಂದ ಮತದಾರರು ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲುವಿಗೆ ಕೈ ಜೋಡಿಸಿದರೆ ಹಳೆ ಪಿಂಚಣಿ ಯೋಜನೆ ಜಾರಿಗೆ ತರಲು ಬದ್ಧ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.
ಧಾರವಾಡ ಜಿಲ್ಲೆಯ ವಿವಿಧೆಡೆಗಳಲ್ಲಿ ರವಿವಾರ ಪ್ರಚಾರ ಕೈಗೊಂಡ ಅವರು, ಆಡಳಿತ ಮಂಡಳಿಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸದೇ ಇಲಾಖೆ ಅನುಮೋದನೆ ಮಾಡಿದ ದಿನಾಂಕ ಪರಿಗಣಿಸಿ ಸೇವಾ ಸೌಲಭ್ಯ ನೀಡಿರುವುದರಿಂದ ಕೆಲವು ಶಿಕ್ಷಕರು ನಿವೃತ್ತಿ ನಂತರ ಪಿಂಚಣಿ ಇಲ್ಲದೇ ಬರಿಗೈಯಲ್ಲಿ ನಿವೃತ್ತಿಯಾಗುತ್ತಿರುವ ವ್ಯವಸ್ಥೆಗೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ. ಅಲ್ಲದೇ ಆಡಳಿತ ಮಂಡಳಿ ನೇಮಕ ಮಾಡಿಕೊಂಡ ಸೇವೆಯನ್ನು ಪರಿಗಣಿಸಿ, ಎಲ್ಲ ಸೇವಾ ಸೌಲಭ್ಯ ಹಾಗೂ ಪಿಂಚಣಿ ಕೊಡಿಸುವ ಕುರಿತು ಇಲ್ಲಿಯವರೆಗೆ ಯಾವುದೇ ರೀತಿಯ ಆದೇಶ ಮಾಡದೇ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೂತನ ಪಿಂಚಣಿ ಯೋಜನೆಯನ್ನು ರದ್ಧುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ ಸರ್ಕಾರಿ, ಖಾಸಗಿ ಶಿಕ್ಷಕರಿಗೆ ಸೌಲಭ್ಯ ದೊರೆಯುವಂತೆ ಮಾಡುವುದು, ನೆನೆಗುದಿಗೆ ಬಿದ್ದಿರುವ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಯನ್ನು ಖಾಸಗಿ ಶಾಲಾ ಶಿಕ್ಷಕರಿಗೆ ಒದಗಿಸುವುದು, ಖಾಸಗಿ ಶಾಲೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೊಡಿಸುವುದು, ವಿದ್ಯಾರ್ಥಿ ಶಿಕ್ಷಕ ಅನುಪಾತ 1:25 ಎಂದು ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದು, ಈ ಎಲ್ಲ ಕನಸುಗಳು ಈಡೇರಲು ಮತದಾರ ಶಿಕ್ಷಕರು ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಧಾರವಾಡದ ಮೂಕಾಂಬಿಕಾ ನಗರದ ಗುರುಕುಲ ಪ್ರೌಢ ಶಾಲೆ, ಸೇಂಟ್ ಜೋಸೆಫ್ ಕಾಲೇಜು, ಎಂ.ಆರ್.ನಗರದ ಜೆಎಸ್‍ಎಸ್ ಮಂಜುನಾಥೇಶ್ವರ ಪ್ರೌಢ ಶಾಲೆ, ರಾಮ ರಹೀಂ ಮಲ್ಟಿ ಕಾಲೇಜು ಸೇರಿದಂತೆ ವಿವಿಧೆಡೆಗಳಲ್ಲಿ ಅವರ ಬೆಂಬಲಿಗರು ಬಿರುಸಿನ ಪ್ರಚಾರ ನಡೆಸುವ ಮೂಲಕ ಗುರಿಕಾರ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಅವರ ಕೈ ಬಲಪಡಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಹುಬ್ಬಳ್ಳಿಯ ಬೈರಿದೇವರಕೊಪ್ಪ ಮತ್ತು ಉಣಕಲ್‍ನ ವಾರ್ಡ್ ನಂ. 35, 36, 37ರಲ್ಲಿ ವಾರ್ಡ್ ಸಮಿತಿಗಳ ಸಭೆಯನ್ನು ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ನಡೆಸಲಾಯಿತು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಂಘಟಕ, ಶಿಕ್ಷಕರ ಕಷ್ಟಗಳಿಗೆ ಸ್ಪಂದಿಸುವ ಬಸವರಾಜ ಗುರಿಕಾರ ಅವರಿಗೆ ಮತ ನೀಡುವಂತೆ ಪ್ರಚಾರ ನಡೆಸಿ ಶಿಕ್ಷಕರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೇ ಕಳೆದ ನಾಲ್ಕು ದಶಕಗಳಿಂದ ಶಿಕ್ಷಕರು ತಮ್ಮ ಬವಣೆಗಳನ್ನು ಹೇಳಲಾಗದೇ ಪರದಾಡುತ್ತಿದ್ದು, ಅವರ ಕಷ್ಟಗಳ ಪರಿಹಾರಕ್ಕೆ ಗುರಿಕಾರ ಅವರು ಸಮರ್ಥರು ಎನ್ನುವುದನ್ನು ತಿಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಿ.ಆರ್. ಶಿರೋಳ, ಶ್ರೀಧರ ರಡ್ಡೇರ, ವಿ.ಜಿ. ಹಿರೇಮಠ, ಎಸ್.ಎಸ್. ಹೂಗಾರ, ಗಿರಣಿ ವಡ್ಡರ, ಎಸ್.ಎಸ್. ದೊಡ್ಡಮನಿ, ಪೂಜಾ, ಪದ್ಮಾ, ಸುಮಾ, ನಿರ್ಮಲಾ ಹೊಂಗಲ ಸೇರಿದಂತೆ ಇತರರು ಇದ್ದರು.
Kshetra Samachara
29/05/2022 08:42 pm