ನವದೆಹಲಿ/ ಧಾರವಾಡ: ಕೋವಿಡ್-19 ಹಾಗೂ ಅದೇ ತರಹದ ರೂಪಾಂತರಿ ಮಹಾಮಾರಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ಅವುಗಳ ಗಂಭೀರ ಪರಿಣಾಮಗಳನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಸಹಾಯವಾಗಬಲ್ಲ ಆಧುನಿಕ ಲಸಿಕೆಗಳನ್ನು ತಯಾರಿಸಲು ಅಗತ್ಯವಿರುವ ಜೈವಿಕ ಸುರಕ್ಷತಾ ಹಂತ-3 ರ ಪ್ರಯೋಗಾಲಯ (Biosafety Level-3 (BSL-3)) ಸ್ಥಾಪನೆಯ ಕೇಂದ್ರವಾಗಿ ಧಾರವಾಡ ಆಯ್ಕೆಯಾಗಿದೆಯೆಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಹೆಲ್ತ್ ಇನ್ಫಾಸ್ಟ್ರಕ್ಚರ್ ಮಿಷನ್ ಯೋಜನೆಯಡಿಯಲ್ಲಿ ಇಂತಹ ಜೈವಿಕ ಸುರಕ್ಷತಾ ಪ್ರಯೋಗಾಲಯಗಳನ್ನು ದೇಶದ ಆಯ್ದ 10 ರಾಜ್ಯಗಳಲ್ಲಿ ಸ್ಥಾಪಿಸಲಾಗುತ್ತಿದ್ದು ಕರ್ನಾಟಕ ರಾಜ್ಯವೂ ಒಂದಾಗಿದೆ. ಅದರಲ್ಲಿ ಧಾರವಾಡ ಜಿಲ್ಲೆ ಆಯ್ಕೆಯಾದ ಸ್ಥಳವಾಗಿದೆ. ಧಾರವಾಡಕ್ಕೆ ಈ ಇಂತಹ ರಾಷ್ಟ್ರೀಯ ಮಟ್ಟದ ಪ್ರಯೋಗಾಲಯ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಎನ್.ಸಿ.ಡಿ.ಎಲ್ ಬಿ.ಎಸ್.ಎಲ್.-3 ರಾಷ್ಟ್ರೀಯ ಪ್ರಯೋಗಾಲಯದ ಸ್ಥಾಪನೆಯು ದೇಶದ 10 ಕೇಂದ್ರಗಳಲ್ಲಿ ಧಾರವಾಡ ಆಯ್ಕೆಯಾಗಿರುವ ವಿಷಯವನ್ನು ಈಗಾಗಲೇ ಕೇಂದ್ರ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರಕ್ಕೆ ತಿಳಿಸಿದ್ದು ಅಗತ್ಯವಿರುವ ಆರ್ಥಿಕ ಅನುದಾನ ಕೂಡಾ ಮಂಜೂರಾಗಿದೆ. ಈ ಪ್ರಯೋಗಾಲಯದ ಸ್ಥಾಪನೆಗೆ ಧಾರವಾಡದಲ್ಲಿ ಅಗತ್ಯವಿರುವ ಸೂಕ್ತ ಸ್ಥಳ ಇತ್ಯಾದಿಗಳ ಬಗ್ಗೆ ಮಾಹಿತಿ ಹೊಂದಿದ ತಜ್ಞ ತಂಡದ ಬಗ್ಗೆ ಮಾಹಿತಿ ನೀಡಲು ಹಾಗೂ ಸಂಬಂಧಿತವಾಗಿ ಕೇಂದ್ರ ಸರ್ಕಾರದೊಂದಿಗೆ ದಕ್ಷವಾಗಿ ಸಂವಹಿಸಲು ನೋಡಲ್ ಅಧಿಕಾರಿಯೊಬ್ಬರನ್ನು ಕೂಡಲೇ ನೇಮಿಸಲು ಕೂಡ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಈ ಸಂಬಂಧ ಕಾರ್ಯೋನ್ಮುಖವಾಗಬೇಕೆಂದೂ ಕೂಡ ಸಚಿವರು ಆಗ್ರಹಿಸಿದ್ದಾರೆ. ನಮ್ಮ ಧಾರವಾಡಕ್ಕೆ ಜೈವಿಕ ಸುರಕ್ಷತಾ ಹಂತ-3 ರ ಪ್ರಯೋಗಾಲಯ (Biosafety Level-3 (BSL-3)) ಸ್ಥಾಪನೆಯ ಕೇಂದ್ರವನ್ನು ಮಂಜೂರು ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಹಾಗೂ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರಿಗೆ ಜೋಶಿವರು ಧನ್ಯವಾದಗಳನ್ನು ಹೇಳಿದ್ದಾರೆ.
Kshetra Samachara
27/04/2022 06:09 pm