ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ಗಲಾಟೆಯಲ್ಲಿ ಎಷ್ಟು ಜನ ಮಾಸ್ಟರ್ ಮೈಂಡ್‌ಗಳಿದ್ದಾರೋ ಅವರನ್ನೆಲ್ಲ ಹಿಡಿದು ಪೊಲೀಸರು ಅವರ ಮೈಂಡ್ ಸರಿ ಮಾಡುವ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮೊದಲು ಒಬ್ಬರನ್ನು ಹಿಡಿದ ನಂತರ ಇವರು ಮಾಸ್ಟರ್ ಮೈಂಡ್ ಎನ್ನುತ್ತಾರೆ. ಆನಂತರ ಮತ್ತೊಬ್ಬ ಮಾಸ್ಟರ್ ಮೈಂಡ್ ಇದ್ದಾನೆ ಎನ್ನುತ್ತಾರೆ. ಹೀಗಾಗಿ ಎಲ್ಲ ಮಾಸ್ಟರ್ ಮೈಂಡ್‌ಗಳನ್ನು ಹಿಡಿಯುವ ಕೆಲಸ ನಡೆದಿದೆ ಎಂದರು.
ಗಲಾಟೆಯಲ್ಲಿ ಭಾಗಿಯಾದ ಉಳಿದ ಜನರನ್ನು ವೀಡಿಯೋ ಕ್ಲಿಪ್ ನೋಡಿ ಹಿಡಿಯುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಗಲಾಟೆಗೆ ಕುಮ್ಮಕ್ಕು ಕೊಟ್ಟವರನ್ನು ಹಾಗೂ ಗಲಾಟೆ ಮಾಡಿದವರನ್ನು ಹಿಡಿದು ಒಳಗಡೆ ಹಾಕಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇವೆ. ಸೂಚನೆ ಪ್ರಕಾರ ಪೊಲೀಸರು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಇದರಲ್ಲಿ ಕೆಲವರಿಗೆ ಬಾಂಗ್ಲಾ ದೇಶದ ಲಿಂಕ್ ಇದೆ ಎಂಬ ಅಂಶ ಗೊತ್ತಾಗಿದೆ. ಈ ಎಲ್ಲದರ ಬಗ್ಗೆ ತನಿಖೆ ನಡೆಯುತ್ತಿದೆ. ಇದೆಲ್ಲದಕ್ಕೂ ರಾಜಕೀಯ ನಾಯಕರು ಪ್ರತಿಕ್ರಿಯೆ ಕೊಡಬೇಕಿಲ್ಲ. ತನಿಖೆ ನಂತರ ಸತ್ಯಾಂಶ ಹೊರಬಿಳಲಿದೆ ಎಂದರು.
ಡಿಕೆಶಿ, ಸಿದ್ದರಾಮಯ್ಯ ನಡುವೆ ಅಂತರ್ ಯುದ್ಧ ನಡೆದಿದೆ. ಇಬ್ಬರೂ ಮುಖ್ಯಮಂತ್ರಿಯಾಗಬೇಕು ಎಂದು ಸುಖಾ ಸುಮ್ಮನೆ ಹೇಳಿಕೆ ಕೊಟ್ಟು ಮುನ್ನೆಲೆಗೆ ಬರುತ್ತಿದ್ದಾರೆ.
ಈ ರೀತಿಯ ಹೇಳಿಕೆಗಳಿಂದಲೇ ಕಾಂಗ್ರೆಸ್ ಯುಪಿಯಲ್ಲಿ 399 ಸ್ಥಾನದಲ್ಲಿ ಸ್ಪರ್ಧೆ ಮಾಡಿತ್ತು. 387 ರಲ್ಲಿ ಕಾಂಗ್ರೆಸ್ ಠೇವಣಿಯನ್ನೇ ಕಳೆದುಕೊಂಡಿದೆ. ಆ ರಾಜ್ಯದಲ್ಲಿ 30 ರಿಂದ 40 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಉತ್ತರಾಖಂಡದಲ್ಲಿ, ಮಣಿಪುರದಲ್ಲಿ ಕಾಂಗ್ರೆಸ್‌ನದ್ದು ಇದೇ ಪರಿಸ್ಥಿತಿ ಇನ್ನು ಗೋವಾದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದರು.
ಕರ್ನಾಟಕದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂದು ಕಾಂಗ್ರೆಸ್ ತುಷ್ಠೀಕರಣ ಪರಾಕಾಷ್ಟೆ ನಡೆಸಿದೆ ಎಂದರು.
ನುಗ್ಗಿಕೇರಿ ಗಲಾಟೆಗೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಕಾರ್ಯಕರ್ತರು ಕೊಟ್ಟ ದೂರನ್ನು ಸ್ವೀಕರಿಸಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ಆ ಬಗ್ಗೆ ನನಗೆ ಗೊತ್ತಿಲ್ಲ ಪರಿಶೀಲನೆ ಮಾಡುತ್ತೇನೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/04/2022 02:56 pm