ಧಾರವಾಡ: ಹಲಾಲ್ ಕಟ್ ವಿವಾದ ವಿಚಾರವಾಗಿ, ಬಿಜೆಪಿ ಒಂದೇ ಸಮಾಜವನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಹಿಜಾಬ್ ಪ್ರಕರಣ, ಹಿಂದೂಯೇತರ ವ್ಯಾಪಾರ ಆಯ್ತು ಈಗ ಹಲಾಲ್-ಜಟ್ಕಾ ವಿವಾದ ಮಾಡಿದ್ದಾರೆ ಎಂದು ಮುಸ್ಲಿಂ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಕಟ್ ವಿವಾದದಲ್ಲಿ ಬಿಜೆಪಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಮೂರು ತಿಂಗಳಿನಿಂದ ಕುತಂತ್ರ ನಡೆಸಿದ್ದಾರೆ. ಮುಸ್ಲಿಂರಗಿಂತ ಹೆಚ್ಚು ಬಿಜೆಪಿ ಅವರೆ ಕುರಾನ್ ಓದುತ್ತಿದ್ದಾರೆ ಅನ್ಸುತ್ತೆ, ಇದನ್ನು ನೋಡಿ ನಮಗೆ ನಾಚಿಕೆ ಬರುವಂತೆ ಆಗಿದೆ. ಮೊದಲು ಜಾತ್ರೆ ಇದ್ದಾಗ ಮಾತ್ರ ಮುಸ್ಲಿಮರು ಅಂಗಡಿ ಹಾಕುತ್ತಿದ್ದರು. ಜಾತ್ರೆಗಳು ಮುಗಿದ ಮೇಲೆ ಖಾಲಿ ಇರುತ್ತಿದ್ದರು, ಆದ್ರೆ, ಇವರು ಅಲ್ಲಿಯೂ ವಿವಾದ ಮಾಡಿದರು ಈಗ ವರ್ಷವೀಡಿ ದುಡಿಯೋಕೆ ನಮ್ಮವರು ಮುಂದಾಗಿದ್ದಾರೆ ಎಂದರು.
ಈಗ ಹಲಾಲ್-ಜಟ್ಕಾ ವಿವಾದ ಮಾಡಿದ್ದಾರೆ, ಜಟ್ಕಾ ತಿನ್ನುವುದಕ್ಕೆ ಯಾರೂ ಬೇಡ ಅಂದಿಲ್ಲ, ಯಾರಿಗೂ ಜಟ್ಕಾ ಅಂಗಡಿ ತೆಗೆಯಬೇಡಿ ಎಂದು ಹೇಳಿಲ್ಲ. ಜಟ್ಕಾ ಬಗ್ಗೆ ನಮ್ಮ ಸಮಾಜ ವಿರೋಧಿಸಿಲ್ಲ, ನೀವು ಬೇಕಾದಷ್ಟು ಜಟ್ಕಾ ಅಂಗಡಿ ತೆಗೆದುಕೊಳ್ಳಿ ಆದರೆ, ಹಲಾಲ್ ಮಾಡೋರಿಗೆ ತೊಂದರೆ ಮಾಡಬೇಡಿ. ಇದು ಬಸವಣ್ಣನವರ ನಾಡು, ಇಲ್ಲಿ ಎಲ್ಲರೂ ಸಹಬಾಳ್ವೆಯಿಂದ ಇರಬೇಕು ಎಂದು ಹೇಳಿದರು.
ಹಿಂದೂ ಸಂಘಟನೆಗಳಿಂದ ವ್ಯಾಪಾರ ಬಹಿಷ್ಕಾರ ವಿಚಾರವಾಗಿ, ನಮ್ಮ ಸಮಾಜದ ಮಸೀದಿ, ಕಾಂಪ್ಲೆಕ್ಸ್ ಗಳಲ್ಲಿಯೂ ಹಿಂದೂಗಳ ಅಂಗಡಿ ಬೇಡ ಅಂತಾ ಹೇಳಲಿ ಅಲ್ಲಿ ಬೇಡ, ನಾವು ಕೊಡುತ್ತೇವೆ ಬನ್ನಿ ಅಂತಾ ಕರೆಯುವ ದಮ್ ಇದೆಯಾ? ಇವರಿಗೆ ಅಂಜುಮನ್ ಕಾಂಪ್ಲೆಕ್ಸ್, ಮಸೀದಿ ಕಾಂಪ್ಲೆಕ್ಸ್ ಗಳಲ್ಲಿ ಹಿಂದೂಗಳ ಅಂಗಡಿಯೂ ಇವೆ. ನಾವು ಯಾರಿಗೂ ಬೇಡ ಎಂದಿಲ್ಲ, ಬಿಜೆಪಿ ಅಂಬೇಡ್ಕರ ಸಂವಿಧಾನ ಓದುತ್ತಿಲ್ಲ. ಕೇವಲ ಕುರಾನ್ ಓದುತ್ತಿದ್ದಾರೆ, ರೈತರ ಸಮಸ್ಯೆ, ನಿರುದ್ಯೋಗದ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ತಮಟಗಾರ ಬಿಜೆಪಿವರ ವಿರುದ್ಧ ವಾಗ್ದಾಳಿ ನಡೆಸಿದರು
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/04/2022 03:05 pm