ಧಾರವಾಡ: ಕೇಂದ್ರ ಸರ್ಕಾರದ ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಕಾಯ್ದೆ ಹೆಸರಿನಲ್ಲಿ ಎಸ್‌ಜಿಎಸ್ಎಸ್‌ಎಚ್ಆರ್ ಕನ್ಸಲ್ಟೆನ್ಸಿಯ ರಾಘವೇಂದ್ರ ಕಟ್ಟಿ ವಂಚನೆ ಮಾಡಿದ್ದಾರೆ. ಇವರ ವಿರುದ್ಧ ಸಿಓಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜನಜಾಗೃತಿ ಸಂಘದ ನೇತೃತ್ವದಲ್ಲಿ ಹಣ ನೀಡಿದ ಅಭ್ಯರ್ಥಿಗಳು, ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಹುದ್ದೆಗೆ ಸರಿಸಮಾನದ ಹುದ್ದೆ ನೀಡುವುದಾಗಿ ರಾಘವೇಂದ್ರ ಕಟ್ಟಿ ಹಾಗೂ ಆತನ ಏಜೆಂಟ್ ಶರಣಪ್ಪ ತಿಕೋಟಿಕರ್ ಅವರು ಒಬ್ಬ ವಿದ್ಯಾರ್ಥಿಯಿಂದ 7.10 ಲಕ್ಷ ಹಾಗೂ ಇಬ್ಬರು ವಿದ್ಯಾರ್ಥಿಗಳಿಂದ ತಲಾ 7.55 ಲಕ್ಷ ರೂ. ಒಟ್ಟು 22,25,000 ರೂಪಾಯಿ ಪಡೆದು ನೌಕರಿ ಕೊಡಿಸದೇ ಹಣವನ್ನೂ ಮರಳಿಸದೇ ವಂಚನೆ ಮಾಡಿದ್ದಾರೆ.
ಇವರಲ್ಲದೇ ಅನೇಕ ಅಭ್ಯರ್ಥಿಗಳು ಲಕ್ಷಾಂತರ ರೂಪಾಯಿ ಕೊಟ್ಟಿದ್ದಾರೆ. ಈ ಸಂಬಂಧ ಉಪನಗರ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ರಾಘವೇಂದ್ರ ಕಟ್ಟಿ ವಾಪಸ್ ಹಣ ನೀಡಿದ ಅಭ್ಯರ್ಥಿಗಳ ಮೇಲೆಯೇ ದೂರು ದಾಖಲಿಸಿದ್ದಾರೆ. ಈ ಎಲ್ಲಾ ಸಂಪೂರ್ಣ ಪ್ರಕರಣವನ್ನು ಸಿಓಡಿಗೆ ನೀಡಿ ತನಿಖೆ ನಡೆಸಬೇಕು ಎಂದು ಹಣ ನೀಡಿದ ಅಭ್ಯರ್ಥಿಗಳು ಆಗ್ರಹಿಸಿದರು. ಬಸವರಾಜ ಕೊರವರ, ನಾಗರಾಜ ಕಿರಣಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
Kshetra Samachara
23/03/2022 01:37 pm