ಧಾರವಾಡ: ವಿಮಾನದಲ್ಲಿ ಶವ ತರಬೇಕಾದರೆ ಹೆಚ್ಚು ಜಾಗ ಬೇಕು. ಅದೇ ಜಾಗದಲ್ಲಿ ಜೀವಂತ ಇರುವ ಎಂಟತ್ತು ಜನರನ್ನು ಸುರಕ್ಷಿತವಾಗಿ ಕರೆತರಬಹುದು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀನ್ ಅವರ ಪಾರ್ಥೀವ ಶರೀರವನ್ನು ತರಲು ಪ್ರಯತ್ನ ನಡೆದಿದೆ. ಉಕ್ರೇನ್ ಈಗ ಯುದ್ಧ ಭೂಮಿ. ಅಲ್ಲಿ ಪರಿಸ್ಥಿತಿ ಕಠಿಣವಾಗಿರುತ್ತದೆ. ಹೀಗಿರುವಾಗ ಭಾರತ ಸರ್ಕಾರ ಸಾಕಷ್ಟು ಶ್ರಮವಹಿಸಿ ಭಾರತೀಯರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ನವೀನ್ ಅವರ ಶವವನ್ನೂ ತರಲು ಪ್ರಯತ್ನ ನಡೆಯುತ್ತಿದೆ ಎಂದರು.
ಜೀವಂತ ಇರುವ ವಿದ್ಯಾರ್ಥಿಗಳನ್ನೇ ಕರೆತರುವುದು ಕಠಿಣವಾಗಿದೆ. ಇನ್ನು ಶವ ತರುವುದು ಸ್ವಲ್ಪ ಕಷ್ಟದ ಕೆಲಸ. ಸ್ವತಃ ಪ್ರಧಾನಿ ಮೋದಿ ಅವರೇ ಈ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ರೊಮೇನಿಯಾಕ್ಕೆ ಬಂದ ವಿದ್ಯಾರ್ಥಿಗಳಿಗೆ ನಮ್ಮ ವಿದೇಶಾಂಗ ಇಲಾಖೆ ಊಟ, ವಸತಿ ವ್ಯವಸ್ಥೆ ಮಾಡುತ್ತಿದೆ. ನಮ್ಮ ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ವೆಚ್ಚವಾಗಲಿದ್ದು, ಆ ಕಾರಣಕ್ಕೆ ವಿದ್ಯಾರ್ಥಿಗಳು ಉಕ್ರೇನ್ ದೇಶಕ್ಕೆ ಹೋಗುತ್ತಿದ್ದಾರೆ. ನಮ್ಮಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಇದೆ. ಇದೊಂದು ಖಾಸಗಿ ಸಂಸ್ಥೆಯಾಗಿರುವುದರಿಂದ ಎಂಬಿಬಿಎಸ್ ಸೀಟಿನ ಕೃತಕ ಅಭಾವ ಸೃಷ್ಟಿಯಾಗಿದೆ. ಅದರಲ್ಲೂ ಭ್ರಷ್ಟಾಚಾರ ಇರುತ್ತದೆ. ಇದರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಆಗಬೇಕಿದೆ. ಬೇರೆ ರಾಷ್ಟ್ರದಂತೆ ನಮ್ಮ ರಾಷ್ಟ್ರದಲ್ಲೂ ಕಡಿಮೆ ಖರ್ಚಿನಲ್ಲೂ ವಿದ್ಯಾರ್ಥಿಗಳು ಮೆಡಿಕಲ್ ಕಲಿಯುವಂತಾಗಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/03/2022 02:31 pm