ಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ್ ಹಾಗೂ ಮಾಜಿ ಎಂಎಲ್ಸಿ ನಾಗರಾಜ್ ಛಬ್ಬಿ ನಡುವೆ ರಾಜಕೀಯ ಸಂಘರ್ಷ ಎಂದಿನಂತೆ ಮುಂದುವರಿದಿದೆ. ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ಖಂಡಿಸಿ ಸೋಮವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತ್ಯೇಕ ಪ್ರತಿಭಟನಾ ಮೆರವಣಿಗೆಗಳು ಇದಕ್ಕೆ ಸಾಕ್ಷಿಯಾದವು.
ಲಾಡ್ ಬೆಂಬಲಿಗರು ಪಟ್ಟಣದ ಆಂಜನೇಯ ವೃತ್ತದಿಂದ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ ನೇತೃತ್ವದಲ್ಲಿ, ಈಶ್ವರಪ್ಪ ವಿರುದ್ದ ಘೋಷಣೆ ಕೂಗುತ್ತ ಮೆರವಣಿಗೆ ನಡೆಸಿದರೆ ಛಬ್ಬಿ ಬೆಂಬಲಿಗರೂ ಪ್ರತ್ಯೇಕ ಮೆರವಣಿಗೆ ನಡೆಸಿ ತಹಸಿಲ್ದಾರ್ ಗೆ ಮನವಿ ಸಲ್ಲಿಸಿದ್ದು ನೋಡಿದರೆ ಇಬ್ಬರೂ ನಾಯಕರ ನಡುವಿನ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿದೆ ಎಂದು ಹೇಳಬಹುದು.
ಮುಂಬರುವ ವಿಧಾನಸಭೆ ಕಲಘಟಗಿ ಟಿಕಟ್ ಗಾಗಿ ಛಬ್ಬಿ ಹಾಗೂ ಲಾಡ್ ನಡುವೆ ತೆರೆಯಮರೆಯಲ್ಲಿ ಕಿತ್ತಾಟ ನಡೆದೆ ಇದೆ. ಒಬ್ಬರು ಸಿದ್ದರಾಮಯ್ಯ ಆಪ್ತರಾದರೆ ಇನ್ನೊಬ್ಬರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಬಲಿಗರಾಗಿದ್ದಾರೆ. ತಮ್ಮ ನಾಯಕ ರಾಹುಲ್ ಗಾಂಧಿಗೆ ಅತ್ಯಂತ ಆಪ್ತ, ಹೀಗಾಗಿ ಟಿಕೆಟ್ ಗ್ಯಾರಂಟಿ ಎಂದು ಲಾಡ್ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ ನಂತರ ಸೇನಾನಿಗಳ ಸನ್ಮಾನ, ಖಾಸಗಿ ಅಂಬ್ಯುಲೆನ್ಸ್ ಮೂಲಕ ಬಡವರಿಗೆ ಆರೋಗ್ಯ ಸೇವೆ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಕಲಘಟಗಿ ಕ್ಷೇತ್ರದ ಜನತೆಗೆ ಸಂತೋಷ ಲಾಡ್ ಆಗಾಗ ಮುಖದರ್ಶನ ಕೊಡುತ್ತಿದ್ದಾರೆ.
ನಾಗರಾಜ್ ಛಬ್ಬಿ ಸಹ ಅವಕಾಶ ಸಿಕ್ಕಾಗಲೆಲ್ಲ ಮತದಾರರಿಗೆ ಸೇವಾ ಭಾಗ್ಯ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಈ ಹಿಂದೆ ಆಹಾರ ಕಿಟ್ ಹಂಚಿಕೆ ಸಂದರ್ಭದಲ್ಲಿ ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಬಹಿರಂಗ ಕಿತ್ತಾಟವೂ ನಡೆದಿತ್ತು.
ಚುನಾವಣೆ ಸಂದರ್ಭದಲ್ಲಿ ಯಾರು ಯಾರ ಬೆಂಬಲಿಗರು?ಯಾರು ಯಾರಿಗೆ ಆಪ್ತರೆಂಬುದು ಗೌಣ. ಯಾರು ಹೆಚ್ಚು ಕಪ್ಪ ಕಾಣಿಕೆ ನೀಡುತ್ತಾರೆ ಅವರಿಗೇ ಟಕೆಟ್ ಎಂಬುದು ಸಾರ್ವಕಾಲಿಕ ಸತ್ಯ. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಹೊರತಾಗಿಲ್ಲ. ಈ ಬಾರಿ ಬಿಜೆಪಿಗೆ ಟಕ್ಕರ್ ಕೊಡಲೇ ಬೇಕೆಂದು ಕಾಂಗ್ರೆಸ್ ಪಣ ತೊಟ್ಟಿರುವುದರಿಂದ ಕೈ ರೇಟ್ ಸ್ವಲ್ಪ ಜಾಸ್ತಿ ಎಂದರೂ ತಪ್ಪಾಗಲಾರದು.
ಹೀಗಾಗಿ ಕಾಂಗ್ರೆಸ್ಸಿನ ರಾಜ್ಯ ಹಾಗೂ ರಾಷ್ಟ್ರ ನಾಯಕರನ್ನು " ಸಂತೋಷ '' ಪಡಿಸುವ ಸಾಮರ್ಥ್ಯ ಯಾರಿಗಿದೆ ಎಂದು ಬಹಿರಂಗವಾಗಿ ಹೇಳಬೇಕಾಗಿಲ್ಲ.
Kshetra Samachara
22/02/2022 10:08 am