ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿರುವ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ದೇವಸ್ಥಾನಗಳ ಸುತ್ತ ಉದ್ಯಾನವನ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಐತಿಹಾಸಿಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಚಂದ್ರಮೌಳೇಶ್ವರ ಹಾಗೂ ಅಮರಗೋಳದ ಬನಶಂಕರಿ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಈ ದೇವಸ್ಥಾನಗಳು 11ನೇ ಶತಮಾನಕ್ಕೆ ಸೇರಿವೆ. ಇವುಗಳನ್ನು ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ.
ಈ ದೇವಸ್ಥಾನಗಳು ಮೂಲ ಸೌಕರ್ಯವಿಲ್ಲದೇ ಹಾಳಾಗುತ್ತಿದ್ದವು. ಇವುಗಳನ್ನು ಪುರಾತತ್ವ ಇಲಾಖೆ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ. ದೇವಸ್ಥಾನಗಳ ಅಭಿವೃದ್ಧಿಗೆ ಸುತ್ತಲಿನ ಮನೆಗಳು ತೊಂದರೆಯಾಗುತ್ತಿದ್ದವು. ರಾಜ್ಯ ಸರ್ಕಾರ ಜಾಗ ಕಲ್ಪಿಸಿದರೆ, ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿದರೆ ದೇವಸ್ಥಾನದ 100 ಮೀಟರ್ ವ್ಯಾಪ್ತಿಗೆ ಬರುವ ಮನೆಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ, ಕಂದಾಯ ಇಲಾಖೆ ಹಾಗೂ ಪುರಾತತ್ವ ಇಲಾಖೆಗಳು ಸರ್ವೇ ಕಾರ್ಯ ನಡೆಸುವಂತೆ ತಿಳಿಸಲಾಗಿದೆ. ದೇವಸ್ಥಾನಕ್ಕೆ ದಿನನಿತ್ಯ 500 ಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಅನುಕೂಲ ದೃಷ್ಟಿಯಿಂದ ಮೂಲ ಸೌಕರ್ಯ ಸೇರಿದಂತೆ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Kshetra Samachara
29/01/2022 06:54 pm