ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ಧಾರವಾಡ ತಾಲೂಕಿನ ನರೇಂದ್ರ, ಕುರುಬಗಟ್ಟಿ ಹಾಗೂ ಮುಳಮುತ್ತಲ ಗ್ರಾಮಗಳಲ್ಲಿ ಬರೋಬ್ಬರಿ ಆರು ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಕರ್ನಾಟಕ ನೀರಾವರಿ ಇಲಾಖೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ಈ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಕರ್ನಾಟಕ ನೀರಾವರಿ ನಿಗಮ ನಿಯಮಿತ ಅನುದಾನದಡಿ ಅಂದಾಜು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನರೇಂದ್ರ ಗ್ರಾಮದಿಂದ ಮಂಗಳಗಟ್ಟಿಗೆ ಹೋಗುವ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ, ಅಂದಾಜು 75 ಲಕ್ಷ ರೂಪಾಯಿ ಅನುದಾನದಲ್ಲಿ ನರೇಂದ್ರ ಗ್ರಾಮದ ಮೆಳೆಪ್ಪಜ್ಜನ ಮಠದ ಹಿಂಭಾಗದಲ್ಲಿ ರಸ್ತೆ ಮತ್ತು ನಾಲಾ ನಿರ್ಮಾಣ ಕಾಮಗಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾಡ ತಾಲೂಕಿನ ಪಿಬಿ (ಸರ್ವಿಸ್) ರಸ್ತೆಯಿಂದ ನರೇಂದ್ರ ಗ್ರಾಮದ ರಸ್ತೆಯ ಸುಧಾರಣೆ ಕಾಮಗಾರಿ, ಮುಳಮುತ್ತಲ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಜಿಲ್ಲಾ ಪಂಚಾಯತ್, ನೈರ್ಮಲ್ಯ ಇಲಾಖೆ, ಕೇಂದ್ರ ಸರ್ಕಾರ ಪುರಸ್ಕೃತ ಹಾಗೂ ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಅಂದಾಜು 82 ಲಕ್ಷ ರೂಪಾಯಿ ಅನುದಾನದಲ್ಲಿ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪಲೈನ್ ಅಳವಡಿಕೆ, ಮನೆಗಳಿಗೆ ನಳಗಳ ಜೋಡಣೆ ಕಲ್ಪಿಸುವ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಇದೇ ವೇಳೆ ಕೊರೊನಾ ವಾರಿಯರ್ಸ್‌ಗಳಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿಯನ್ನು ಅವರು ಸನ್ಮಾನಿಸಿದರು.
ಅಭಿವೃದ್ಧಿ ದೃಷ್ಠಿಯಿಂದ ಧಾರವಾಡ ಗ್ರಾಮೀಣ ಭಾಗದ ಸರ್ವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನತೆಗೆ ಕೊಟ್ಟ ಭರವಸೆಗಳ ಪೈಕಿ ಈಗಾಗಲೇ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇನೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲ ಅಭಿವೃದ್ಧಿ ಕಾಮಗಾರಿಗೆ ಹಿನ್ನಡೆಯಾಗಿದೆ. ಬರುವ ದಿನಗಳಲ್ಲಿ ಅವುಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
Kshetra Samachara
11/01/2022 10:44 pm