ಧಾರವಾಡ: ಪಂಜಾಬ್ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಗೌರವ ತೋರಿದ್ದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಧಾರವಾಡ ಟಿಪ್ಪು ವೃತ್ತದ ಬಳಿ ಇರುವ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಒಬ್ಬ ಪ್ರಧಾನ ಮಂತ್ರಿ ಬಂದಾಗ ಶಿಷ್ಟಾಚಾರದ ಪ್ರಕಾರ ನಡೆದುಕೊಳ್ಳಬೇಕು. ಅಲ್ಲದೇ ಅವರಿಗೆ ಯಾವುದೇ ತೊಂದರೆಯಾಗದಂತೆ ಗೌರವಯುತವಾಗಿ ನಡೆದುಕೊಳ್ಳಬೇಕು. ಆದರೆ, ಪಂಜಾಬ್ ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಧಾನಿ ಮೋದಿ ಅವರು ಸಂಚರಿಸುತ್ತಿದ್ದ ರಸ್ತೆಯಲ್ಲಿ ಪ್ರತಿಭಟನೆಗೆ ಅವಕಾಶ ಕೊಟ್ಟಿದೆ.
ಪಾಕ್ ಗಡಿ 10 ಕಿಲೋ ಮೀಟರ್ ದೂರದಲ್ಲಿರುವಾಗಲೇ ಪ್ರಧಾನಿಯನ್ನು 20 ನಿಮಿಷ ರಸ್ತೆಯ ಮೇಲೆ ತಡೆದು ನಿಲ್ಲಿಸಲಾಗಿದೆ. ದೇಶದ ಒಬ್ಬ ಪ್ರಧಾನಮಂತ್ರಿಗೆ ಸೂಕ್ತ ಭದ್ರತೆ ನೀಡದೇ ಪಂಜಾಬ್ ಸರ್ಕಾರ ತನ್ನ ಕೀಳುಮಟ್ಟದ ರಾಜಕಾರಣ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಕಚೇರಿ ಎದುರು ಟೈರ್ ಸುಟ್ಟು ಪ್ರತಿಭಟನೆ ನಡೆಸಲು ಕಾರ್ಯಕರ್ತರು ಮುಂದಾದರು. ಈ ವೇಳೆ ಪೊಲೀಸರು ಆ ಬೆಂಕಿಯನ್ನು ನಂದಿಸಿದ್ದರಿಂದ ಮಾಜಿ ಶಾಸಕಿ ಸೀಮಾ ಮಸೂತಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು.
Kshetra Samachara
07/01/2022 02:37 pm