ವರದಿ : ಬಿ. ನಂದೀಶ್
ಅಣ್ಣಿಗೇರಿ : ಕಳೆದ ಎರಡೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಣ್ಣಿಗೇರಿ ಪಟ್ಟಣದ ಪುರಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಡಿ. 30 ಕ್ಕೆ ಅಭ್ಯರ್ಥಿಗಳ ಹಣೆಬರಹ ಬಯಲಾಗಲಿದೆ. ಡಿಸೆಂಬರ್ 15ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಇಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಸಾಯಂಕಾಲದ ವೇಳೆಗೆ ತಿರಸ್ಕೃತ ಮತ್ತು ಸ್ವೀಕೃತ ನಾಮಪತ್ರಗಳ ವಿವರ ಲಭ್ಯವಾಗಲಿದೆ.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಈಗಾಗಲೇ ತಮ್ಮ ವಾರ್ಡಗಳಲ್ಲಿ ಬಹಳಷ್ಟು ಹುಮ್ಮಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನು ರಾಷ್ಟ್ರೀಯ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಕಾದು ನೋಡಿ ಕೊನೆಗೆ ಬಿ ಫಾರ್ಮ್ ಸಿಗದಿದ್ದಾಗ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 113 ನಾಮಪತ್ರಗಳು ಸಲ್ಲಿಕೆಯಾಗಿವೆ.
ದಿ. 18 ರಂದು ನಾಮಪತ್ರ ಹಿಂಗೆದುಕೊಳ್ಳಬೇಕಾಗಿದ್ದು ಒಂದು ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳದಿದ್ದರೆ ಎರಡೂ ಪಕ್ಷಗಳ ಮುಖಂಡರಿಗೆ ಬಂಡಾಯ ಅಭ್ಯರ್ಥಿಗಳ ದೊಡ್ಡ ತಲೆನೋವಾಗುವ ಸಾಧ್ಯತೆಗಳಿವೆ. ಹಂತ ಹಂತವಾಗಿ ಚುನಾವಣೆ ಕಾವೇರುತ್ತಿದ್ದು, ಅಧಿಕೃತ ಅಭ್ಯರ್ಥಿಗಳು ಪ್ರಚಾರಕ್ಕೆ ಸಜ್ಜಾಗುತ್ತಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಹುರುಪು ಕಾಣುತ್ತಿದ್ದೆ. ಆದರೆ ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ ಜೆಡಿಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಆ ಪಕ್ಷದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಉತ್ಸಾಹ ಕಂಡುಬರುತ್ತಿಲ್ಲ.
Kshetra Samachara
16/12/2021 03:37 pm