ಧಾರವಾಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ಅತಿಥಿ ಉಪನ್ಯಾಸಕರು ಧಾರವಾಡದ ಜಂಟಿ ನಿರ್ದೇಶಕರ ಕಚೇರಿ ಮುಂದೆ ಶನಿವಾರ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಧಾರವಾಡದ ಕಲಾಭವನದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡ ಅತಿಥಿ ಉಪನ್ಯಾಸಕರು, ಕವಿಸಂ ಸಂಘ, ಅಂಜುಮನ್ ವೃತ್ತ, ಆಝಾದ್ ಪಾರ್ಕ್, ಜುಬ್ಲಿ ವೃತ್ತ, ಕೋರ್ಟ್ ಸರ್ಕಲ್, ಜಿಲ್ಲಾ ಗ್ರಂಥಾಲಯ, ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಜಂಟಿ ನಿರ್ದೇಶಕ ಕಚೇರಿ ತಲುಪಿ ಧರಣಿ ಕುಳಿತರು.
ಒಕ್ಕೂಟದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ ಮಾತನಾಡಿ, ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ 2007ರಿಂದಲೂ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರ ಕಳೆದ 14 ವರ್ಷಗಳಿಂದಲೂ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸದೇ ಕುರುಡತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
ನಿಯಮಗಳಂತೆ ಅತಿಥಿ ಉಪನ್ಯಾಸಕರು ಯುಜಿಸಿ ಪರೀಕ್ಷೆ (ನೆಟ್-ಸೆಟ್) ಮತ್ತು ಪಿಎಚ್‌ಡಿ ಪದವಿ ಹೊಂದಿದ್ದರೂ, ಕೇವಲ 12 ರಿಂದ 14 ಸಾವಿರ ವೇತನ ನೀಡುತ್ತಿದೆ. ಇಂದಿನ ದುಬಾರಿ ಕಾಲದಲ್ಲಿ ಈ ಸಂಬಳದಲ್ಲಿ ಉಪನ್ಯಾಸಕರು ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.
ಅತಿಥಿ ಉಪನ್ಯಾಸಕ ತಾತ್ಕಾಲಿಕ ಎಂಬುದು ಅವೈಜ್ಞಾನಿಕ. ಇದು ಉನ್ನತ ಶಿಕ್ಷಣ, ಕಾಲೇಜುಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಗೌರವ ಧನದ ಅರೆಕಾಲಿಕ ಬದಲಿಗೆ ಪೂರ್ಣ ಸೇವಾ ಅವಧಿ ನಿಗದಿಪಡಿಸುವಂತೆ ಒತ್ತಾಯ ಮಾಡಿದರು.
Kshetra Samachara
11/12/2021 10:08 pm