ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಅವಿಭಾಜ್ಯ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ ಎರಡು ಸ್ಥಾನಗಳಿಗೆ ಡಿ.10 ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಹಾಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಇತ್ತೀಚೆಗೆ ಹಾನಗಲ್ ಉಪ ಸಮರದಲ್ಲಿ ಗೆಲುವು ಸಾಧಿಸಿರುವ ಶ್ರಿನಿವಾಸ ಮಾನೆ ಅವರ ಸ್ಥಾನಗಳಿಗೆ ಈ ಬಾರಿ ಹಲವು ಆಕಾಂಕ್ಷಿಗಳಿದ್ದು, ಎರಡೂ ಪಕ್ಷಗಳೂ ತಲಾ ಒಂದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.

ಮೊದಲ ಬಾರಿಗೆ ಕಾಂಗ್ರೆಸ್ ಪಾಳೆಯದಲ್ಲಿ ಅವಿಭಾಜ್ಯ ಧಾರವಾಡ ಜಿಲ್ಲೆಯಿಂದ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆಂಬ ಕೂಗು ಕೇಳಿ ಬಂದಿದ್ದು ಈಗಾಗಲೇ ಹಲವು ಆಕಾಂಕ್ಷಿಗಳು ತಮ್ಮ ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಧಾರವಾಡ ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಹುಬ್ಬಳ್ಳಿ ಅಂಜುಮನ್ ಅಧ್ಯಕ್ಷ ಮಹ್ಮದ ಯೂಸೂಫ್ ಸವಣೂರ, ಕೆಪಿಸಿಸಿ ಅಲ್ಪ ಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ, ಸಿ.ಎಸ್. ಮೆಹಬೂಬ್ ಭಾಷಾ, ಐ.ಜಿ. ಸನದಿ, ಶಾಕೀರ್ ಸನದಿ ಮುಂತಾದವರು ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ಹೆಸರೂ ಕೇಳಿ ಬರಲಾರಂಭಿಸಿದೆ. ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಹಿರಿಯ ಮುಖಂಡ ಶರಣಪ್ಪ ಕೊಟಗಿ, ಅರವಿಂದ ಕಟಗಿ, ಮಾಜಿ ಸಚಿವ ಬಸವರಾಜ ಶಿವಣ್ಣವರ, ಎಂ.ಎಂ.ಹಿರೆಮಠ, ಆನಂದ ಗಡ್ಡದೇವರಮಠ, ಸದಾನಂದ ಡಂಗನವರ, ಸಚಿನ್ ಪಾಟೀಲ್ ಮುಂತಾದವರು ಅವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಹಾಲಿ ಸದಸ್ಯ, ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹೋದರ ಪ್ರದೀಪ ಶೆಟ್ಟರ್‌ಗೆ ಬಹುತೇಕ ಟಿಕೆಟ್ ಖಚಿತವಾಗಿದ್ದರೂ, ಹಲವರು ಬೇಡಿಕೆ ಮುಂದಿಟ್ಟಿದ್ದಾರೆ. ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ಗದಗಿನ ಎಂ.ಎಸ್. ಕರಿಗೌಡರ, ಹಾವೇರಿಯ ಪಾಲಾಕ್ಷಗೌಡ ಪಾಟೀಲ, ಭೋಜರಾಜ ಕರೂದಿ, ಸಿದ್ದರಾಜ ಕಲಕೋಟಿ ಮುಂತಾದವರು ಟಿಕೆಟ್ ಕೇಳಿದ್ದಾರೆ.

ಈ ಚುನಾವಣೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರೇ ನಿರ್ಣಾಯಕರಾಗಿದ್ದು, ಅತೀ ಹೆಚ್ಚು ಮತದಾರರು ಹಾವೇರಿಯಲ್ಲಿದ್ದಾರೆ. ಕೈ-ಕಮಲ ಪಾಳೆಯದಲ್ಲಿ ಚಟುವಟಿಕೆ ಬಿರುಸುಗೊಂಡಿದ್ದು, 16 ರಿಂದಲೇ ನಾಮಪತ್ರ ಸಲ್ಲಿಸುವ ಅವಕಾಶ ಕಲ್ಪಿಸಿದ್ದು, ಡಿ.10 ಕ್ಕೆ ಮತದಾನ ನಡೆಯಲಿದೆ. ಮೊದಲಿಗಿಂತ ಕಡಿಮೆ ಅವಧಿ ನೀಡಿದ್ದು ಮೂರ್‍ನಾಲ್ಕು ದಿನಗಳಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಅಂತಿಮಗೊಳ್ಳುವ ಸಾಧ್ಯತೆ ಇದೆ.

Edited By : Nirmala Aralikatti
Kshetra Samachara

Kshetra Samachara

12/11/2021 07:15 pm

Cinque Terre

43.65 K

Cinque Terre

0

ಸಂಬಂಧಿತ ಸುದ್ದಿ