ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿಎಂ ಬರ್ತಾರೆ ಅಂತಾ ಗಿಡಗಳನ್ನೇ ಕಿತ್ತೊಗೆದರು

ಧಾರವಾಡ: ಹೆಚ್ಚೆಚ್ಚು ಸಸಿಗಳನ್ನು ನೆಡಿ, ಪರಿಸರ ಸಂರಕ್ಷಣೆಗೆ ಕೈಜೋಡಿಸಿ ಅಂತಾ ಸರ್ಕಾರವೇ ಬಾಯಿ ಬಡಿದುಕೊಳ್ಳುತ್ತದೆ. ಆದರೆ, ಇದೀಗ ಬೇಲಿಯೇ ಎದ್ದು ಹೊಲ ಮೇಯ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವೊಂದಕ್ಕೆ ಬರುತ್ತಾರೆ ಎಂಬ ಕಾರಣಕ್ಕೆ ನೂರಾರು ಗಿಡಗಳನ್ನು ಕಿತ್ತೊಗೆದಿರುವ ಘಟನೆ ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದಿದೆ.

ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿಗಳ ಜನ್ಮದಿನದ ಕಾರ್ಯಕ್ರಮವನ್ನು ಮನಗುಂಡಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಇದೇ ತಿಂಗಳ 13 ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಆಗಮಿಸುವವರಿದ್ದಾರೆ. ಶಾಲಾ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಗೊಳಿಸಲಾಗಿದ್ದು, ಈ ವೇದಿಕೆಗೆ ಗಿಡಗಳು ಅಡ್ಡಿಯಾಗುತ್ತವೆ ಎಂದು ಅವುಗಳನ್ನು ಕಿತ್ತೊಗೆಯಲಾಗಿದೆ.

ನರೇಗಾ ಯೋಜನೆಯಡಿ ಅರಣ್ಯ ಇಲಾಖೆ ವತಿಯಿಂದ ಶಾಲಾ ಆವರಣದಲ್ಲಿ ಸುಮಾರು ನೂರಕ್ಕಿಂತಲೂ ಅಧಿಕ ಮರಗಳನ್ನು ಹಚ್ಚಲಾಗಿತ್ತು. ಸರ್ಕಾರವೇ ಕೂಲಿಕಾರರಿಗೆ ವೇತನ ನೀಡಿ ಸಸಿಗಳನ್ನು ಹಚ್ಚಿಸಿತ್ತು. ಸದ್ಯ ಸಸಿಗಳೂ ಬೆಳೆದು ಒಂದು ಹಂತಕ್ಕೆ ಬಂದಿದ್ದವು. ಈಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆ ಎಲ್ಲಾ ಮರಗಳನ್ನು ಕಿತ್ತೊಗೆಯಲಾಗಿದೆ ಎಂದು ಮನಗುಂಡಿ ಗ್ರಾಮದ ಫಕ್ಕೀರಪ್ಪ ಆರೋಪಿಸಿದರು.ಬ

ಬಸವಾನಂದ ಸ್ವಾಮೀಜಿಗಳ ಜನ್ಮದಿನದ ಕಾರ್ಯಕ್ರಮಕ್ಕೆ ಓಡಾಡುತ್ತಿರುವ ಕಾರ್ಯಕರ್ತರು ಈ ರೀತಿ ಗಿಡಗಳನ್ನು ಕಿತ್ತೊಗೆಯುವ ಕೆಲಸ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಒಟ್ಟಾರೆಯಾಗಿ ಮುಖ್ಯಮಂತ್ರಿಗಳು ಬರುತ್ತಾರೆ ಎಂಬ ಕಾರಣಕ್ಕೆ ಬೆಳೆದು ದೊಡ್ಡದಾಗಬೇಕಿದ್ದ ಹಲವಾರು ಮರಗಳನ್ನು ನೆಲಸಮ ಮಾಡಲಾಗಿದೆ. ಮರಗಳನ್ನು ಬೆಳೆಸಿ ಎಂದು ಹೇಳಬೇಕಾದ ಸರ್ಕಾರ ಒಂದೆಡೆಯಾದರೆ, ಸರ್ಕಾರವೇ ಕಾರ್ಯಕ್ರಮಕ್ಕೆ ಬರುವಾಗ ಮರಗಳನ್ನು ನೆಲಸಮಗೊಳಿಸುವ ವ್ಯವಸ್ಥೆ ಒಂದೆಡೆಯಾಗಿದೆ. ಮರಗಳನ್ನು ಹಾಳು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲೇಬೇಕು ಎಂಬ ಒತ್ತಾಯ ಇದೀಗ ಮನಗುಂಡಿ ಗ್ರಾಮಸ್ಥರಿಂದ ಕೇಳಿ ಬಂದಿದ್ದು, ಈ ಬೆಳವಣಿಗೆ ಯಾವ ಹಂತಕ್ಕೆ ಬಂದು ತಲುಪುತ್ತದೆಯೋ ಕಾದು ನೋಡಬೇಕಿದೆ.

Edited By : Shivu K
Kshetra Samachara

Kshetra Samachara

10/11/2021 09:26 am

Cinque Terre

33.57 K

Cinque Terre

13

ಸಂಬಂಧಿತ ಸುದ್ದಿ