ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 74-ಪಶ್ಚಿಮ ಕ್ಷೇತ್ರದಿಂದ 10 ಜನ ಕಾಂಗ್ರೆಸ್ ಅಭ್ಯರ್ಥಿಗಳನ್ನು ತಾವೇ ಗೆಲ್ಲಿಸಿರುವುದಾಗಿ ನಾಗರಾಜ ಗೌರಿ ಅವರು ಪತ್ರಿಕೆಯೊಂದರ ಮೂಲಕ ಹೇಳಿದ್ದಾರೆ. ಅವರ ಈ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಕಾಂಗ್ರೆಸ್ ಮುಖಂಡ ದಾನಪ್ಪ ಕಬ್ಬೇರ ಹೇಳಿದ್ದಾರೆ.
74-ಪಶ್ಚಿಮ ಕ್ಷೇತ್ರದ ಪಾಲಿಕೆಯ ಕಾಂಗ್ರೆಸ್ ಸದಸ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೌರಿ ಅವರು ತಾವೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ಹೇಳಿರುವುದು ತಪ್ಪು. ಅವರು 74 ಕ್ಷೇತ್ರದ ಯಾವ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ಮಾಡಿಲ್ಲ. ಈ ಕ್ಷೇತ್ರದಲ್ಲಿ ಇಸ್ಮಾಯಿಲ್ ತಮಟಗಾರ ಅವರು ಹಿಡಿತ ಸಾಧಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದರು.
ಮಾಜಿ ಸಚಿವ ಸಂತೋಷ ಲಾಡ್, ಶ್ರೀನಿವಾಸ ಮಾನೆ, ಇಸ್ಮಾಯಿಲ್ ತಮಟಗಾರ, ದೀಪಕ ಚಿಂಚೋರೆ, ಪಿ.ಎಚ್.ನೀಲಕೇರಿ ಅವರು ತಮ್ಮ ಹಿಡಿತ ಸಾಧಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಗೌರಿ ಅವರು ತಾವೇ ಗೆಲ್ಲಿಸಿರೋದಾಗಿ ಹೇಳಿದ್ದು ವಿಪರ್ಯಾಸ ಎಂದರು.
ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ ಎಂದಿದ್ದರೆ ನಾವು ಅದನ್ನು ಒಪ್ಪುತ್ತಿದ್ದೆವು. ಆದರೆ, ಗೌರಿ ಅವರು ತಾವೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿರೋದಾಗಿ ಹೇಳಿರುವುದು ಗೊಂದಲಕ್ಕೀಡಾಗಿದೆ ಎಂದರು.
Kshetra Samachara
01/10/2021 12:17 pm