ಧಾರವಾಡ: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರದ ವಿರುದ್ಧ ಧಾರವಾಡ ತಾಲೂಕಾ ಬ್ರಾಹ್ಮಣ ಸಭಾ ಆಕ್ರೋಶ ಹೊರ ಹಾಕುತ್ತಿದೆ. ಈ ಚಲನಚಿತ್ರದಲ್ಲಿ ಬ್ರಾಹ್ಮಣ ಹಾಗೂ ಸನಾತನ ಹಿಂದೂ ಧರ್ಮವನ್ನು ಅವಮಾನಿಸುವ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಗುರುವಾರದೊಳಗೆ ಆ ದೃಶ್ಯಗಳನ್ನು ತೆಗೆದು ಹಾಕದೇ ಇದ್ದರೆ ದೊಡ್ಡಮಟ್ಟದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಧಾರವಾಡ ತಾಲೂಕಾ ಬ್ರಾಹ್ಮಣ ಸಭಾದ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರಕ್ಕೆ ಸೆನ್ಸಾರ್ ಮಾಡುವಾಗ ಸರ್ಕಾರವಾದರೂ ಈ ದೃಶ್ಯಗಳನ್ನು ಗಮನಿಸಬೇಕಿತ್ತು. ಒಂದು ರೀತಿಯಲ್ಲಿ ಸರ್ಕಾರ ಕೂಡ ಇದಕ್ಕೆ ಹಿಂದಿನಿಂದ ಬೆಂಬಲ ಕೊಟ್ಟಿದೆ. ಚಿತ್ರದಲ್ಲಿನ ಆ ದೃಶ್ಯಾವಳಿಗಳನ್ನು ತೆಗೆದು ಹಾಕದೇ ಇದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದರು.
ಹಿಂದೂ ಜಾಗರಣ ವೇದಿಕೆ ಮುಖಂಡ ಜಯತೀರ್ಥ ಮಳಗಿ ಮಾತನಾಡಿ, ಯಾವುದೇ ಸಿನಿಮಾದಲ್ಲಿ ಉಳಿದ ಧರ್ಮದ ಆಚರಣೆಯನ್ನು ಅವಮಾನ ಮಾಡುವುದಿಲ್ಲ. ಆದರೆ, ಪ್ರತಿ ಸಿನಿಮಾನದಲ್ಲಿ ಹಿಂದೂ ಹಾಗೂ ಹಿಂದೂ ಧರ್ಮದ ಆಚರಣೆಯನ್ನು ಅವಮಾನಿಸುತ್ತಲೇ ಬರಲಾಗುತ್ತಿದೆ. ಇದು ನಮ್ಮ ದುರ್ದೈವ. ನಮಗೆ ಶಾಸ್ತ್ರ ಹೇಳುವುದೂ ಗೊತ್ತು. ಶಸ್ತ್ರ ಹಿಡಿಯುವುದೂ ಗೊತ್ತು. ಇನ್ನು ಮುಂದೆ ಯಾವುದೇ ಚಿತ್ರ ನಿರ್ಮಾಪಕರು ಈ ರೀತಿಯ ಅವಹೇಳನಕಾರಿ ದೃಶ್ಯಗಳನ್ನು ಸೆರೆ ಹಿಡಿದು ಹಿಂದೂ ಧರ್ಮಕ್ಕೆ ಅವಮಾನಿಸುವ ಕೆಲಸ ಮಾಡಬಾರದು. ಪೊಗರು ಚಿತ್ರ ತಂಡದವರು ಕೂಡಲೇ ಆ ದೃಶ್ಯಾವಳಿಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
Kshetra Samachara
23/02/2021 12:06 pm