ಧಾರವಾಡ: ಸಾಲ ಮರು ಪಾವತಿ ಮಾಡುವಂತೆ ರೈತರಿಗೆ ಪದೇ ಪದೇ ನೋಟಿಸ್ ನೀಡಬೇಡಿ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಧಾರವಾಡದ ಕೆವಿಜಿ ಬ್ಯಾಂಕ್ ನ ಮುಖ್ಯ ಶಾಖೆ ಎದುರು ಪ್ರತಿಭಟನೆ ನಡೆಸಿ ಕೆವಿಜಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಕೊರೊನಾ ಹಾಗೂ ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಿರುವಾಗ ರೈತರ ನೆರವಿಗೆ ಇರಬೇಕಿದ್ದ ಬ್ಯಾಂಕು ರೈತರ ರಕ್ತ ಹೀರುವ ಕೆಲಸ ಮಾಡಬಾರದು. 2017 ರಲ್ಲಿ ಸರ್ಕಾರ ರೈತರ ಸಾಲ ಮನ್ನಾ ಯೋಜನೆ ಜಾರಿಗೆ ತರುತ್ತದೆ ಎಂದು ಹೇಳಿದ್ದರಿಂದ ರೈತರು ಸಾಲ ಮರುಪಾವತಿ ಮಾಡಿರಲಿಲ್ಲ.
ಇದೀಗ ಅಸಲಿಗಿಂತ ಅದರ ಬಡ್ಡಿಯೇ ಹೆಚ್ಚಾಗಿದೆ. ಎಸ್ ಬಿಐ, ಐಸಿಐಸಿಐ, ಐಡಿಬಿಐ ಸೇರಿದಂತೆ ಇತರ ಬ್ಯಾಂಕುಗಳು ರೈತರ ದುಸ್ಥಿತಿ ಕಂಡು ಅಸಲಿನಲ್ಲಿ ಅರ್ಧಕ್ಕಿಂತ ಕಡಿಮೆ ಸಾಲವನ್ನು ಮರುಪಾವತಿ ಮಾಡಿಕೊಂಡು ಮತ್ತೇ ಸಾಲ ಸೌಲಭ್ಯ ನೀಡಿವೆ. ಹಳ್ಳಿ ಹಳ್ಳಿಗಳಲ್ಲೂ ಶಾಖೆ ಹೊಂದಿರುವ ಕೆವಿಜಿ ಬ್ಯಾಂಕು ರೈತರ ಸುಲಿಗೆಗೆ ಇಳಿದಿದೆ. ಕೆವಿಜಿ ಬ್ಯಾಂಕು ಕೂಡಲೇ ಓಟಿಎಸ್ ಪ್ರಕಾರ ಅಸಲಿನಲ್ಲಿ ಅರ್ಧದಷ್ಟು ಕಡಿತಗೊಳಿಸಿ ರೈತರಿಗೆ ಮರು ಸಾಲ ಸೌಲಭ್ಯ ಕಲ್ಪಿಸಬೇಕು.
ಬ್ಯಾಂಕ್ ನವರು ಇದೇ ರೀತಿ ರೈತರಿಗೆ ಕಿರುಕುಳ ನೀಡುವ ಪ್ರಕ್ರಿಯೆ ಮುಂದುವರೆಸಿದರೆ ಕೆವಿಜಿ ಬ್ಯಾಂಕ್ ನ ಎಲ್ಲ ಶಾಖೆಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಸಿದರು.
Kshetra Samachara
18/02/2021 09:55 pm