ಧಾರವಾಡ: ಈ ದೇಶದ ಚುಕ್ಕಾಣೆ ಹಿಡಿದ ನರೇಂದ್ರ ಮೋದಿ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಬೇಕಿತ್ತು. ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ರೈತರಿಗೆ ಪೂರಕವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತರಬಹುದಿತ್ತು. ಆದರೆ, ಅವರು ಆ ಕೆಲಸ ಮಾಡದೇ ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಕೃಷಿ ಭೂಮಿಯನ್ನು ಮಾರಿ ಬಂಡವಾಳ ಶಾಹಿಗಳಿಗೆ ಒತ್ತೆ ಇಡಲು ಹೊರಟಿದ್ದಾರೆ. ಕಳೆದ 54 ದಿನಗಳಿಂದ ದೆಹಲಿಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ. ಅವರ ಧರಣಿಗೆ ಕೇಂದ್ರ ಸರ್ಕಾರ ಸೌಜನ್ಯಕ್ಕೂ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದರು.
ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆಯಂತಹ ಕಾನೂನುಗಳನ್ನು ಸರ್ಕಾರಗಳು ಜಾರಿಗೆ ತಂದಿವೆ. ಇವೆಲ್ಲವನ್ನು ವಿರೋಧಿಸಿ ಜ.26 ರಂದು ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಚಳವಳಿಯನ್ನು ಹಮ್ಮಿಕೊಂಡಿದ್ದೇವೆ. ಬೃಹತ್ ಜನ ಗಣರಾಜ್ಯೋತ್ಸವ ಪರೇಡ್ ಎಂಬ ಹೆಸರನ್ನು ಈ ಹೋರಾಟಕ್ಕೆ ಇಡಲಾಗಿದೆ ಎಂದು ಮಾಲಿ ಪಾಟೀಲ್ ತಿಳಿಸಿದರು.
Kshetra Samachara
21/01/2021 07:51 pm