ಧಾರವಾಡ: ನಿನ್ನೆ ಧಾರವಾಡದ ಇಟಿಗಟ್ಟಿ ಬಳಿಯ ಬೈಪಾಸ್ ರಸ್ತೆಯಲ್ಲಿ ನಡೆದ ಅಪಘಾತಕ್ಕೆ ಅಶೋಕ ಖೇಣಿ ಅವರೇ ನೇರ ಕಾರಣರಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆಗ್ರಹಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1999ರ ಮೇ 25 ರಂದು ಅಶೋಕ ಖೇಣಿ ಅವರಿಗೆ ಈ ರಸ್ತೆಯನ್ನು ಗುತ್ತಿಗೆ ನೀಡಲಾಯಿತು. ಇಂಡಿಯಾದಲ್ಲೇ ಇದು ಮೊದಲ ಗುತ್ತಿಗೆಯಾಗಿದೆ. ಅಶೋಕ ಖೇಣಿ ಅವರು ನಂದಿ ಇನ್ಫಾಸ್ಟ್ರಕ್ಚರ್ ಮೂಲಕ ಈ ರಸ್ತೆಯಲ್ಲಿ ಟೋಲ್ ಸಂಗ್ರಹಣೆ ಮಾಡುತ್ತಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇಂತಹ ರಸ್ತೆ ಇಲ್ಲ. ಅಷ್ಟೊಂದು ಕೆಟ್ಟದಾಗಿ ಖೇಣಿ ಅವರು ಈ ರಸ್ತೆ ನಿರ್ಮಾಣ ಮಾಡಿದ್ದಾರೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಅಪಘಾತ ಸಂಭವಿಸುತ್ತಲೇ ಇರುತ್ತವೆ. 25 ವರ್ಷಗಳಿಂದ ಅಶೋಕ ಖೇಣಿ ಅವರು ಈ ರಸ್ತೆ ನಿರ್ವಹಣೆ ಮಾಡುತ್ತಿದ್ದು, ಷಟ್ಪಥ ರಸ್ತೆ ನಿರ್ಮಾಣ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಪ್ರತಿದಿನ ಇಲ್ಲಿ 12 ರಿಂದ 13 ಲಕ್ಷ ಟೋಲ್ ಸಂಗ್ರಹಣೆಯಾಗುತ್ತದೆ. ಈ ಹಣ ಪಡೆದು ಖೇಣಿ ಅವರು ಯಾವುದೇ ಕೆಲಸ ಮಾಡಿಸಿಲ್ಲ. ಇಲ್ಲಿ ಆಗುವ ಅಪಘಾತ ದುರಂತಕ್ಕೆಲ್ಲ ಖೇಣಿ ಅವರೇ ಕಾರಣ. ಕೂಡಲೇ ಅವರನ್ನು ಅರೆಸ್ಟ್ ಮಾಡಬೇಕು ಎಂದು ಚಿಂಚೋರೆ ಆಗ್ರಹಿಸಿದರು.
Kshetra Samachara
16/01/2021 04:17 pm