ಧಾರವಾಡ: ಕಾಳಿ ಸ್ವಾಮೀಜಿ ಕನ್ನಡ ವಿರೋಧಿಯಾಗಿ ಮಾತನಾಡಿಲ್ಲ. ನಾನು ಅವರ ಜೊತೆ ಮಾತನಾಡಿದ್ದೇನೆ. ಕಾಳಿ ಸ್ವಾಮೀಜಿ ಕೆಂಪೇಗೌಡರಿಗೆ ಹಾಗೂ ಕುವೆಂಪು ಅವರಿಗೆ ಬೈದಿದ್ದಾರೆ ಎನ್ನಲಾಗಿದೆ ಆದರೆ, ಅವರು ಯಾವ ಸಂದರ್ಭದಲ್ಲೂ ಬೈದಿಲ್ಲ. ಈ ಸಂಬಂಧ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕಿತ್ತು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಳಿ ಸ್ವಾಮೀಜಿಗೆ ಮಸಿ ಬಳಿದು ಅವರ ಮೇಲೆ ದಾಳಿ ಮಾಡಿದವರು ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಎಂದರು.
ಕಾಳಿ ಸ್ವಾಮೀಜಿ ಏನಾದರೂ ತಪ್ಪು ಮಾಡಿದ್ದರೆ ಕೇಸ್ ಹಾಕಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಕಾವಿಧಾರಿಗಳಿಗೆ ಮಸಿ ಬಳಿಯುವುದು ಸರಿಯಲ್ಲ. ಇದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಸ್ವಾಮೀಜಿ ಮೇಲೆ ದಾಳಿ ಮಾಡಿದವರು ಕೂಡಲೇ ಕ್ಷಮೆ ಕೇಳಬೇಕು. ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇವತ್ತು ಕಾಳಿ ಸ್ವಾಮೀಜಿ ಮೇಲೆ ಈ ರೀತಿ ಹಲ್ಲೆ ನಡೆಯುತ್ತದೆ. ನಾಳೆ ಮತ್ತೊಬ್ಬರ ಮೇಲೆ ನಡೆಯುತ್ತದೆ. ಇದನ್ನು ಸರ್ಕಾರ ಹದ್ದುಬಸ್ತಿನಲ್ಲಿಡಬೇಕು ಎಂದರು.
ಕಳೆದ ಹತ್ತಾರು ವರ್ಷಗಳಿಂದ ಕಾಶಿ ವಿಶ್ವನಾಥ ಗೋಡೆ ಮೇಲೆ ಇರುವ ವಿಗ್ರಹಗಳಿಗೆ ಪೂಜೆ ಮಾಡುತ್ತ ಬರಲಾಗಿತ್ತು. ಮುಲಾಯಂ ಸಮಯದಲ್ಲಿ ಮುಸ್ಲಿಂ ಓಲೈಕೆಗಾಗಿ ಅದನ್ನು ತಡೆಯಲಾಗಿತ್ತು. ಈಗ ವಾರಣಾಸಿ ನ್ಯಾಯಾಲಯವು ಅದನ್ನು ಸರ್ವೆ ಮಾಡಿ ಮೇ.17ರ ಒಳಗೆ ವರದಿ ಕೊಡಬೇಕು ಎಂದು ಆದೇಶ ಹೊರಡಿಸಿದೆ. ಇದು ಅತ್ಯಂತ ಸಮರ್ಪಕವಾಗಿದೆ ಎಂದರು.
ಅರ್ಚಕರು ಹಾಗೂ ಮಹಿಳೆಯರು ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ಸರ್ವೆ ಮಾಡುವುದನ್ನು ನೋಡಿದರೆ ದಾದಾಗಿರಿ ಮಾಡುವಂತೆ ಕಾಣುತ್ತಿದೆ. ಅದು ಕಾಶಿ ದೇವಸ್ಥಾನವಾಗಿದೆ. ಔರಂಗಜೇಬನ ಕಾಲದಲ್ಲಿ ಅದನ್ನು ಒಡೆದು ಮಸೀದಿ ಕಟ್ಟಿದ್ದರು. ಅಲ್ಲಿ ಬಸವಣ್ಣ ಇದ್ದಾನೆ, ಈಶ್ವರಲಿಂಗ ಇತ್ತು ಇವೇ ಅದಕ್ಕೆ ಸಾಕ್ಷಿ. ಇಡೀ ದೇವಾಲಯವನ್ನು ಒಡೆದು ಮಸೀದಿ ಕಟ್ಟಿದ್ದು ಸತ್ಯ. ಕೋರ್ಟ್ ಸರ್ವೆಗೆ ಅವಕಾಶ ಸಿಕ್ಕಿದೆ. ಈಗ ತಡೆದರೆ ಅದನ್ನು ಒಡೆದು ಒಳಗಡೆ ಹೋಗಬೇಕು. ಪೊಲೀಸ್ ಇಲಾಖೆಯ ಸಹಕಾರ ತೆಗೆದುಕೊಳ್ಳಬೇಕು. ಈ ರೀತಿ ಮಾಡಿದ್ದರಿಂದಲೇ ರಾಮ ಮಂದಿರ ನಮ್ಮ ಕೈಗೆ ಬಂದಿದೆ. ಸ್ನೇಹದಿಂದ ಬಿಟ್ಟುಕೊಟ್ಟರೆ ನಮ್ಮ, ನಿಮ್ಮಲ್ಲಿ ಬಾಂಧವ್ಯ ಇರಲಿದೆ. ಇಲ್ಲದಿದ್ದರೆ ಸಂಘರ್ಷ, ದ್ವೇಷ ಉಳಿಯಲಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/05/2022 03:32 pm