ಧಾರವಾಡ: ಧಾರವಾಡದ ಪ್ರತಿಷ್ಠಿತ ನುಗ್ಗಿಕೇರಿ ದೇವಸ್ಥಾನದಲ್ಲಿ ಮುಸ್ಲಿಂ ಅಂಗಡಿಗಳಿಗೆ ಅವಕಾಶ ಕೊಡಬಾರದು ಎಂಬ ಶ್ರೀರಾಮ ಸೇನೆ ಕಾರ್ಯಕರ್ತರ ಒತ್ತಾಯ ಹಾಗೂ ಎಲ್ಲ ಸಮುದಾಯದವರಿಗೂ ವ್ಯಾಪಾರ ನಡೆಸಲು ಅವಕಾಶ ಕೊಡಬೇಕು ಎಂಬ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ನುಗ್ಗಿಕೇರಿ ಟ್ರಸ್ಟ್ ಕಮಿಟಿಯವರು ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ.
ಹೌದು! ಹಿಂದೂ ದೇವಾಲಯಗಳ ಆವರಣದಲ್ಲಿ ಮುಸ್ಲಿಂ ವ್ಯಾಪರಿಗಳಿಗೆ ಅವಕಾಶ ಕೊಡಬಾರದು ಎಂಬ ಅಭಿಯಾನ ಆರಂಭಗೊಂಡಿತ್ತು. ಆಗ ಶ್ರೀರಾಮ ಸೇನೆ ಕಾರ್ಯಕರ್ತರು ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ಅಂಗಡಿಗಳಿಗೆ ಅವಕಾಶ ಕೊಡಬಾರದು ಎಂದು ಮನವಿ ಸಲ್ಲಿಸಿದ್ದರು. ಅದಾದ ಬಳಿಕ ಶ್ರೀರಾಮ ಸೇನೆ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿ ನಬಿಸಾಬ್ನ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಘಟನಾವಳಿ ನಂತರ ಹಿಂದೂ ಮುಖಂಡರು ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ಅಂಗಡಿಗಳಿಗೆ ಅವಕಾಶ ಕೊಡಬಾರದು ಎಂದು ಮತ್ತೆ ಮನವಿ ಸಲ್ಲಿಸಿದ್ದರು. ಮುಸ್ಲಿಂ ಮುಖಂಡರು ಕೂಡ ಸೌಹಾರ್ಧತೆಯಿಂದ ಬದುಕೋಣ ಮುಸ್ಲಿಂರಿಗೂ ವ್ಯಾಪಾರ ಮಾಡಲು ಅವಕಾಶ ಕೊಡಬೇಕು ಎಂದು ಟ್ರಸ್ಟ್ನವರಿಗೆ ಮನವಿ ಸಲ್ಲಿಸಿದ್ದರು.
ಇಬ್ಬರ ಮನವಿಯನ್ನಾಧರಿಸಿ ನಿನ್ನೆ ಸಂಜೆ ದೇವಸ್ಥಾನದಲ್ಲಿ ಸಭೆ ನಡೆಸಿದ ಟ್ರಸ್ಟ್ ಕಮಿಟಿಯವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ದೇವಸ್ಥಾನ ಒಟ್ಟು 2 ಎಕರೆ 32 ಗುಂಟೆ ವಿಶಾಲವಾದ ಜಾಗ ಹೊಂದಿದ್ದು, ಈ ಜಾಗದಲ್ಲಿ ಯಾರೂ ಅಂಗಡಿ ಹಚ್ಚುವಂತಿಲ್ಲ. ಈ ಜಾಗ ಬಿಟ್ಟು ಹೊರಗಡೆ ಯಾರು ಬೇಕಾದರೂ ವ್ಯಾಪಾರ ಮಾಡಿಕೊಳ್ಳಬಹುದು ಎಂಬ ತೀರ್ಮಾನ ಕೈಗೊಂಡರು.
ಆಡಳಿತ ಮಂಡಳಿಯವರು ನಂತರ ಈ ವಿಷಯವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/04/2022 03:59 pm