ನಾನು ಯಾವತ್ತಿದ್ದರೂ ಕೋಮುವಾದಿಗಳನ್ನು ವಿರೋಧಿಸುತ್ತೇನೆ. ಜೆಡಿಎಸ್ನವರು ಕೋಮುವಾದಿಗಳನ್ನು ವಿರೋಧಿಸುವುದಾದರೆ ನಮ್ಮ ವಿರುದ್ಧ ಅಭ್ಯರ್ಥಿಯನ್ನು ಯಾಕೆ ಹಾಕಬೇಕಿತ್ತು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮುವಾದಿಗಳನ್ನು ಸೋಲಿಸಲು ಕೈ-ತೆನೆ ಒಂದಾಗಬೇಕು ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಕೋಮುವಾದಿಗಳನ್ನು ಸೋಲಿಸಲು ಜೆಡಿಎಸ್ಗಿಂದ ಮೊದಲು ನಾವೇ ತೀರ್ಮಾನ ಮಾಡಿ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ನಮ್ಮ ಅಭ್ಯರ್ಥಿ ಹಾಕಿದ ಮೇಲೆ ಒಂದು ತಿಂಗಳ ನಂತರ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಹಾಕಿದೆ. ಕೋಮುವಾದಿಗಳನ್ನು ಸೋಲಿಸಬೇಕು ಅಂತಾದರೆ ಜೆಡಿಎಸ್ ಯಾಕೆ ತನ್ನ ಅಭ್ಯರ್ಥಿ ಹಾಕಬೇಕಿತ್ತು? ನಾವು ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದೇವೆ. ಅವರನ್ನು ಗೆಲ್ಲಿಸಬೇಕು ಎಂತಿದ್ದರೆ ಜೆಡಿಎಸ್ ತನ್ನ ಅಭ್ಯರ್ಥಿ ಬಿಟ್ಟು ನಮ್ಮ ಅಭ್ಯರ್ಥಿಗೆ ಮತ ಹಾಕಲಿ. ದೇವೇಗೌಡರು ರಾಜ್ಯಸಭೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ದೆವಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಬಳಿ 37 ಜನ ಶಾಸಕರಿದ್ದರೂ ಬಿಜೆಪಿ ಅಧಿಕಾರಕ್ಕೆ ಬರಬಾರದು ಅಂತಾ ಕುಮಾರಸ್ವಾಮಿಯನ್ನೇ ಸಿಎಂ ಮಾಡಿದ್ದೆವು. ದೇವೇಗೌಡರು ಪ್ರಧಾನಮಂತ್ರಿಯಾಗೋದಕ್ಕೆ ಬೆಂಬಲ ನೀಡಿದ್ದೆವು. ನಮಗೆ ಈಗ ಅವರು ಬೆಂಬಲ ನೀಡಲಿ. ಕೋಮುವಾದಿಗಳನ್ನು ಸೋಲಿಸಲು ಜೆಡಿಎಸ್ನವರು ನಮಗೆ ಬೆಂಬಲ ಕೊಡಲಿ ಎಂದರು.
ಯಡಿಯೂರಪ್ಪ ಮತ್ತು ನಾನು ಭೇಟಿಯಾಗಿದ್ದು ಯಾವುದೋ ಮಾತುಕತೆಗಲ್ಲ. ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಇಲ್ಲ. ಭೇಟಿಯಾಗಿ ಬರೀ ಹಲೋ ಹಲೋ ಅಂದಿದ್ದೇವಷ್ಟೆ ಎಂದರು.
ಸದ್ಯ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರು ಬದಲಾವಣೆ ಬಯಸಿದ್ದಾರೆ. 30 ವರ್ಷದಿಂದ ಶಿಕ್ಷಕರ ಪರವಾಗಿ ಕೆಲಸ ಮಾಡಿದ ಬಸವರಾಜ ಗುರಿಕಾರ ಅವರು ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ಗುರಿಕಾರ ಅವರು ಗೆದ್ದೇ ಗೆಲ್ಲುತ್ತಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/06/2022 12:47 pm