ಪಂಚಮಸಾಲಿ 2ಎ ಮೀಸಲಾತಿಗಾಗಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಮುದಾಯ ನೀಡಿದ್ದ ಗಡುವು ಮಾ.30 ನಾಳೆಗೆ ಮುಗಿಯಲಿದೆ. ಆದರ ಒಳಗಾಗಿ ಮುಖ್ಯಮಂತ್ರಿಗಳ ಅಭಿಪ್ರಾಯ ನಮಗೆ ತಿಳಿಯಬೇಕಿದೆ ಎಂದು ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿಗಳು ಹೇಳಿದರು.
ಅವರು ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾ.31 ರಂದು ಪಂಚಮಸಾಲಿ 2ಎ ಮೀಸಲಾತಿ ವಿಷಯದ ಕುರಿತು ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್'ನಲ್ಲಿ ಪಂಚಮಸಾಲಿ ಸಮುದಾಯದ ಸಭೆ ಕರೆಯಲಾಗಿದೆ ಕಾರ್ಯಕ್ರಮದ ನೇತೃತ್ವವನ್ನು ಪಂಚಮಸಾಲಿ ಹೋರಾಟ ಸಮಿತಿ ಅಧ್ಯಕ್ಷ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅಧ್ಯಕ್ಷತೆಯನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಹಿಸಲಿದ್ದಾರೆ.
ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗೆ ಸಂಬಂಧಿಸಿದಂತೆ ಮಾ.31 ರಂದು ಅಂತಿಮ ಉಗ್ರ ಹೋರಾಟದ ರೂಪುರೇಷೆ ಸಿದ್ಧಪಡಿಸಿ ಏಪ್ರೀಲ್ 14 ರಂದು ಹೋರಾಟ ಕೈಗೊಳ್ಳಲಾಗುವುದು ಎಂದರು.
ಕಳೆದ 10 ವರ್ಷಗಳಿಂದ ಬಿ.ಎಸ್.ಯಡಿಯೂರಪ್ಪನವರು ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿಗರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪಂಚಮಸಾಲಿ ಸಮುದಾಯದ ಓಲವು ಹೊಂದಿದ್ದಾರೆ ಒಳ್ಳೊಳ್ಳೆ ಮಾತು ಆಡುತ್ತಾರೆ, ಅದನ್ನು ಮೀಸಲಾತಿ ನೀಡಿ ತೋರಿಸಲಿ ಎಂದರು.
ನಾವು ನಮ್ಮ ನ್ಯಾಯ ಕೇಳುತ್ತಿದ್ದೇವೆ, ನಿಮಗೆ ಮೀಸಲಾತಿ ನೀಡುವುದಿಲ್ಲ ಎಂದರೆ ಸಿಎಂ ಅದನ್ನು ತಿಳಿಸಲಿ ನಾವೂ ಮೀಸಲಾತಿ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದರು.
Kshetra Samachara
29/03/2022 04:26 pm