ಹುಬ್ಬಳ್ಳಿ: ಇಷ್ಟು ದಿನ ತಣ್ಣಗಾಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಮತ್ತೆ ಮುನ್ನಲೆಗೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ ಬಳಿಕ ಹುಬ್ಬಳ್ಳಿಯಲ್ಲೂ ವಿವಾದ ಹುಟ್ಟಿಕೊಂಡಿದ್ದು, ಈದ್ಗಾ ಮೈದಾನದಲ್ಲಿ ಹುಟ್ಟಿಕೊಂಡ ವಿವಾದ ಏನೂ ಅಂತೀರಾ ಈ ಸ್ಟೋರಿ ನೋಡಿ.
ದಶಕಗಳ ಕಾಲ ಹುಬ್ಬಳ್ಳಿಯನ್ನು ಹೊತ್ತಿ ಉರಿಯುವಂತೆ ಮಾಡಿತ್ತು ಈದ್ಗಾ ವಿವಾದ. ಹುಬ್ಬಳ್ಳಿಯ ಈದ್ಗಾ ಮೈದಾನದಕ್ಕಾಗಿ ನಡೆದ ಹೋರಾಟದಲ್ಲಿ ಘಟಾನುಘಟಿ ನಾಯಕರು ಅಧಿಕಾರದ ಗದ್ದುಗೆ ಏರಿದ್ರೆ, ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತಿ, ಸಿಎಂ ಸ್ಥಾನವನ್ನೇ ಕಳೆದುಕೊಂಡ್ರು, ಅಂದ್ರೆ ಅಷ್ಟೊಂದು ರಣ ರೋಚಕ ಇತಿಹಾಸ ಇದೆ ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟಕ್ಕೆ. ಆದರೆ ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಮುಕ್ತಾಯಗೊಂಡು ಎಲ್ಲರೂ ಶಾಂತವಾಗಿದ್ದಾರೆ. ಆದರೆ ಇತ್ತೀಚೆಗೆ ನಡೆದ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ ಬಳಿಕ, ಹುಬ್ಬಳ್ಳಿಯ ಈದ್ಗಾ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ರಾಣಿ ಚೆನ್ನಮ್ಮ ಈದ್ಗಾ ಮೈದಾನ ಗಜಾನನ ಉತ್ಸವ ಸಮಿತಿ ಹಾಗೂ ಶ್ರೀರಾಮ ಸೇನಾ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಇದು ಹೊಸದೊಂದು ವಿವಾದ ಹುಟ್ಟುಹಾಕುವ ಸಾಧ್ಯತೆ ದಟ್ಟವಾಗಿದೆ.
ಇನ್ನೂ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿಯೇ ಗಣೇಶ ಉತ್ಸವಕ್ಕೆ ಅನುಮತಿ ನೀಡುವಂತೆ ಹೋರಾಟ ನಡೆಸಿದ್ದು, ಹೊಸದಾಗಿ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಇದೇ ಆಗಸ್ಟ್ 15ರಂದು ಹುಬ್ಬಳ್ಳಿಯ ಐತಿಹಾಸಿಕ ಮೂರು ಸಾವಿರ ಮಠದಲ್ಲಿ ಸಭೆ ಕರೆಯಲಾಗಿದ್ದು, ನಗರದ ಹಿಂದೂ ಸಮಾಜದ ಗಣ್ಯರನ್ನು ಸಭೆಗೆ ಆಹ್ವಾನಿಸಲಾಗಿದೆ. ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಿಸಲು ಅದರ ಪೂರ್ವ ಸಿದ್ಧತೆ, ರೂಪರೇಷೆಗಳನ್ನು ಚೆರ್ಚಿಸಲು ಸಭೆ ಕರೆಯಲಾಗಿದೆ. ಇದು ಸಾಕಷ್ಟು ಪರ ವಿರೋಧ ಚರ್ಚೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವರು ಮಾತ್ರ ಪಾಲಿಕೆಯ ಮೇಲೆ ಜವಾಬ್ದಾರಿ ಹಾಕಿ ವಿಷಯವನ್ನು ತಳ್ಳಿ ಹಾಕಿದ್ದಾರೆ.
ಒಟ್ಟಿನಲ್ಲಿ ಇಂತಹದೊಂದು ಚರ್ಚೆ ಮುನ್ನೆಲೆಗೆ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆ ಯಾವ ರೀತಿ ಕ್ರಮ ಕೈಗೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
12/08/2022 07:01 pm