ಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ್ ನೇತ್ರತ್ವದಲ್ಲಿ ಕಿಸಾನ್ ಮಜ್ದೂರ್ ಬಚಾವೋ ಬೃಹತ್ ರ‍್ಯಾಲಿ ನಾಳೆ
ಕಲಘಟಗಿ:ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಪಟ್ಟಣದಲ್ಲಿ ಕಿಸಾನ್ ಮಜ್ದೂರ್ ಬಚಾವೋ ಬೃಹತ್ ರ‍್ಯಾಲಿಯನ್ನು ಅಕ್ಟೋಬರ್ 2 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ತಿಳಿಸಿದರು.
ಮಾಜಿ ಸಚಿವ ಸಂತೋಷ ಲಾಡ್ ಅವರು ಅಂದು ಬೆಳಿಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜಯಂತಿಯಲ್ಲಿ ಭಾಗವಹಿಸಿ, ನಂತರ ಬೆಳಿಗ್ಗೆ 11 ಗಂಟೆಗೆ ಎಪಿಎಂಸಿಯಲ್ಲಿ ಕಲಘಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಿಸಾನ್ ಮಜ್ದೂರ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಆಯೋಜಿಸಿರುವ "ಕಿಸಾನ್ ಮಜ್ದೂರ್ ಬಚಾವೋ ದಿವಸ " ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ತಾಲೂಕಿನ ರೈತರ ಬೆಳೆಹಾನಿ, 2019ರ ಬೆಳೆ ವಿಮೆ ರೈತರಿಗೆ ಬಾರದೆ ಇರುವುದು ಹಾಗೂ ಕೂಲಿಕಾರ್ಮಿಕರ, ವಯೋವೃದ್ಧರ ವೃದ್ಧಾಪ್ಯ ವೇತನ, ತಾಲೂಕಿನಲ್ಲಿ ಅಪಾರವಾದ ಮಳೆಯಿಂದ ಸಾಕಷ್ಟು ಮನೆಗಳು ಹಾನಿಯಾದ ಕುರಿತು ಪರಿಹಾರಕ್ಕೆ ಒತ್ತಾಯಿಸಿ ಮತ್ತು ತಾಲೂಕಿನ ಇನ್ನೂ ಅನೇಕ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ತಹಶೀಲ್ದಾರರ ಮುಖಾಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.ಕೆಪಿಸಿಸಿ ಸದಸ್ಯರಾದ ಎಸ್. ಆರ್. ಪಾಟೀಲ,ಜಿಲ್ಲಾ ಉಪಾಧ್ಯಕ್ಷ ಲಿಂಗರಡ್ಡಿ ನಡುವಿನಮನಿ ಉಪಸ್ಥಿತರಿದ್ದರು.
Kshetra Samachara
01/10/2020 03:54 pm