ಹುಬ್ಬಳ್ಳಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದ್ದೇವೆಂದು ಬಸವರಾಜ ಬೊಮ್ಮಾಯಿ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಆದರೆ ಸೂರು ಕಳೆದುಕೊಂಡವರಿಗೆ ಬಿಡಿಗಾಸಿನ ಪರಿಹಾರ ನೀಡಿದೆ. ಸರ್ಕಾರ ಬಿದ್ದಿರುವ ಮನೆಗಳಿಗೆ ಐದು ಸಾವಿರ ನೀಡಿದೆ. ಕಲ್ಲು ಹೊರ ಹಾಕುವ ಕೂಲಿಗೂ ಈ ಹಣ ಸಾಲಲ್ಲ. ಇದರಿಂದ ಸಂತ್ರಸ್ತರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಗಾರು ಪೂರ್ವ ಸುರಿದ ಮಳೆಗೆ ಧಾರವಾಡ ಜಿಲ್ಲೆಯಲ್ಲಿ ನೂರಾರು ಮನೆಗಳು ನೆಲಕಚ್ಚಿವೆ. ಸರಕಾರ ಮಾತ್ರ ಬಿಡಿಗಾಸಿನ ಪರಿಹಾರ ನೀಡಿ ಕೈ ತೆಗೆದುಕೊಳ್ಳುತ್ತಿದೆ. ಇನ್ನೂ ಹಲವರಿಗೆ ಈ ಬಿಡಿಗಾಸು ಕೂಡ ತಲುಪಿಲ್ಲ.
ಇನ್ನೂ ಕುಂದಗೋಳ ತಾಲೂಕಿನಲ್ಲಿ ಮನೆಗಳ ಪರಿಹಾರ ಕೋರಿ ಸಲ್ಲಿಕೆಯಾದ 222 ಅರ್ಜಿಗಳ ಪೈಕಿ 191 ತಿರಸ್ಕಾರಗೊಂಡಿವೆ. ನವಲಗುಂದ ತಾಲೂಕಿನಲ್ಲಿ 143 ಅರ್ಜಿಗಳ ಪೈಕಿ ಕೇವಲ 24 ಮಾತ್ರ ತಿರಸ್ಕೃತಗೊಂಡಿವೆ. ಉಳಿದಂತೆ ಹುಬ್ಬಳ್ಳಿ ಗ್ರಾಮಾಂತರ ತಾಲೂಕು ವ್ಯಾಪ್ತಿಯಲ್ಲಿ 76 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 37 ತಿರಸ್ಕೃತಗೊಂಡಿವೆ. ಧಾರವಾಡ ತಾಲೂಕಿನಲ್ಲಿ 69 ಅರ್ಜಿಗಳ ಪೈಕಿ 13 ಮಾತ್ರ ತಿರಸ್ಕಾರಗೊಂಡಿವೆ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಹೆಚ್ಚು ಮನೆಗಳನ್ನು ಪರಿಹಾರಕ್ಕೆ ಗುರುತಿಸಲಾಗಿದೆ. ಆದರೆ ಕಾಂಗ್ರೆಸ್ ಶಾಸಕಿಯಾಗಿರುವ ಕುಂದಗೋಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಮೇಲ್ಚಾವಣಿ, ಮೂರು ಗೋಡೆ ಬಿದ್ದು ಒಂದು ಗೋಡೆ ಉಳಿದರೆ ಅದನ್ನು ಅಧಿಕಾರಿಗಳು ಭಾಗಶಃ ಎಂದು ಪರಿಗಣಿಸಿ ಗರಿಷ್ಠ ಐದು ಸಾವಿರ ರೂ. ಪರಿಹಾರ ವಿತರಿಸಲಾಗುತ್ತಿದೆ. ಒಂದು ಮಾನವ ಪ್ರಾಣ ಹಾನಿ, 27 ಜಾನುವಾರುಗಳ ಜೀವ ಹಾನಿ ಸೇರಿ 6.63 ಲಕ್ಷ ರೂ. ಪರಿಹಾರ ವಿತರಿಸಿದ್ದರೆ, ಬಿದ್ದ 108 ಮನೆಗಳಿಗೆ 5.47 ಲಕ್ಷ ರೂ. ಬಿಡಿಗಾಸಿನ ಪರಿಹಾರ ವಿತರಿಸಲಾಗಿದೆ.
ಆದಷ್ಟು ಬೇಗ ಬೊಮ್ಮಾಯಿ ಸರ್ಕಾರ ಈ ಬಗ್ಗೆ ಗಮನ ಹರಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಮನೆ ಕಳೆದುಕೊಂಡ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.
Kshetra Samachara
14/07/2022 06:21 pm