ಧಾರವಾಡ: ಹಾ ನಮಸ್ಕಾರ್ರೀ ಧಾರವಾಡದ ಮಹಾಜನತೆಗೆ. ಇವತ್ತ ನಾವು ಧಾರವಾಡದ ವಾರ್ಡ್ ನಂಬರ್ 2ರ ಕಥಿ ಹೊತ್ತ ತಂದೇವ್ರಿ. ಹುಬ್ಬಳ್ಳಿ, ಧಾರವಾಡದ ವಾರ್ಡ್ ನಂಬರ್ ಎರಡು ಅಂದ್ರ ಸಾಕಷ್ಟ ಅಭಿವೃದ್ಧಿ ಆಗಿರತೈತಿ ಅಂತ ನೀವು ಭಾವಿಸಿರಬಹುದು. ಆದ್ರ ನಿಮ್ಮ ಭಾವನೆ ತಪ್ಪ ನೋಡ್ರಿ. ಯಾಕಂದ್ರ ನಾವು ಈ ವಾರ್ಡಿನ್ಯಾಗ ಸುತ್ತಾಡಿ ಬಂದೇವಿ. ಈ ವಾರ್ಡಿನೊಳಗ ಬರುವ ಹಾಶ್ಮಿನಗರ, ಮೆಹಬೂಬನಗರ, ಎತ್ತಿನಗುಡ್ಡದ ರಸ್ತೆಕ್ಕ ನಾವು ಹೋಗಿದ್ವಿ. ಅಲ್ಲಿನ ರಸ್ತೆ ಪರಿಸ್ಥಿತಿ ನೋಡಿಬಿಟ್ರ ಈ ವಾರ್ಡಿನ ಕಾರ್ಪೊರೇಟರ್ ಸುರವ್ವ ಪಾಟೀಲ ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂಗ ಐತಿ ನೋಡ್ರಿ.
ಇಲ್ಲಿರೋ ಮನೆಗಳು ಅಕ್ರಮ ಸಕ್ರಮ. ಹಿಂಗಾಗಿ ಇಲ್ಲೆ ರಸ್ತೆ ಮಾಡಸಾಕ ಆಗಿಲ್ಲ ಅನ್ನೋ ಮಾತ ಬರತೈತಿ. ಅಲ್ರಿ ಅಕ್ರಮ ಸಕ್ರಮ ಅಂದ್ರ ಇವರು ಮತದಾರರು ಹೌದೋ ಅಲ್ಲೋ ಅನ್ನೋ ಪ್ರಶ್ನೇನೂ ಬರಬೇಕಲ್ಲ?
ಈ ಏರಿಯಾದಾಗಿನ ಪ್ರಮುಖ ಸಮಸ್ಯೆ ಅಂದ್ರ ರಸ್ತೆ ಸಮಸ್ಯೆ. ಎತ್ತಿನಗುಡ್ಡಕ್ಕ ಹೋಗು ರಸ್ತೆ ಅಂತೂ ಹದಗೆಟ್ಟ ಹೈದರಾಬಾದ್ ಆಗೇತಿ. ರಸ್ತೆ ತುಂಬ ತೆಗ್ಗ, ಮೋರಿ ಬಿದ್ದ ಮಳಿ ಬಂದ್ರ ಸಾಕು ಎಲ್ಲಿ ತೆಗ್ಗ ಐತಿ, ಎಲ್ಲಿ ಮೋರಿ ಐತಿ ಅಂತ ಹುಡಿಕ್ಯಾಡಕೊಂಡ ಹೋಗು ಪರಿಸ್ಥಿತಿ ಐತಿ. ಬೀದಿ ದೀಪ ಮತ್ತ ಕಸದ ಸಮಸ್ಯೆ ಏನು ಈ ಏರಿಯಾದಾಗ ಇಲ್ಲ. ಆದ್ರ, ಜನರಿಗೆ ಪ್ರಮುಖವಾಗಿ ಬೇಕಾಗಿರೋ ರಸ್ತೆನ ಇಲ್ಲದಂಗ ಆಗೇತಿ.
ಇನ್ನ ಚರಂಡಿಗಳಂತೂ ಕಸದಿಂದ ಹುಗದಾವ್. ನೀರು ಸರಿಯಾಗಿ ಹರದು ಹೋಗದಂಗ ಆಗೇತಿ. ಮಳಿ ಆದ್ರ ನೀರೆಲ್ಲ ರಸ್ತೆ. ಮ್ಯಾಲ ಹರಿತೈತಿ. ಸುರವ್ವ ಪಾಟೀಲ ಅವರು ಬಂದಾಗ ನಾವೂ ಸಾಕಷ್ಟ ಸಲಾ ಈ ಸಮಸ್ಯೆ ಹೇಳೇವಿ. ಆದ್ರ ಯಾವುದೂ ಕೆಲಸ ಆಗಿಲ್ಲ. ಇಲ್ಲಿನ ರಸ್ತೆಗಳು ಕೆಂಪು ಮಣ್ಣಿನ ರಸ್ತೆ ಅದಾವ. ಡಾಂಬರ್ ರಸ್ತೆಯರ, ಕಾಂಕ್ರೀಟ್ ರಸ್ತೆಯರ ಮಾಡಿಕೊಡ್ರಿ ಅಂತ ಕೇಳೇವಿ. ಆದ್ರ, ಆ ಕಾರ್ಯ ಇನ್ನೂ ಕೈಗೂಡಿಲ್ಲ ಅಂತಾರ ಇಲ್ಲಿನ ಜನ.
ಕೇಳಿದ್ರಲ್ಲ. ಇಲ್ಲಿ ಚೆಂಬರ್ ಲೈನ್ ಇಲ್ಲ. ಸರಿಯಾದ ರಸ್ತೆ ಇಲ್ಲ. ಇನ್ನ ಎತ್ತಿನಗುಡ್ಡದ ಮುಖ್ಯ ರಸ್ತೆ ಹದಗೆಟ್ಟ ಹೋಗೇತಿ. ಇಲ್ಲಿನ ಜನ ಧೂಳಿನ ಸಮಸ್ಯೆ ಅನುಭವಿಸಾಕತ್ತಾರ. ಇಲ್ಲಿನ ಕಾರ್ಪೋರೇಟರ್ ಸುರವ್ವ ಪಾಟೀಲ ಅವರಿಗೆ ಈ ಸಮಸ್ಯೆ ಗೊತ್ತೈತಿ. ನೋಡುಣ ಇನ್ನಮ್ಯಾಲರ ಇಲ್ಲಿನ ಜನರ ಸಮಸ್ಯೆಗೆ ಪಾಟೀಲ ಮೇಡಂ ಸ್ಪಂದಿಸ್ತಾರನ ಕಾದು ನೋಡುಣಂತ.
Kshetra Samachara
30/09/2022 03:04 pm