ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆಯಲ್ಲಿ ಕಮಿಷನ್ ದಂಧೆ ದೊಡ್ಡಮಟ್ಟದಲ್ಲಿ ಬೇರು ಬಿಟ್ಟಿದೆ. ಈ ದಂಧೆ ವಿರುದ್ಧ ಸಿಡಿದೆದ್ದ ಅಧಿಕಾರಿ ವರ್ಗ ಈಗ ತೆಪ್ಪಗೆ ಕುಳಿತಿದೆ. ಕಮಿಷನ್ ಕೊಡದಿದ್ದರೇ ದುಡಿಯುವುದೇ ಕಷ್ಟವಾಗಿದೆ. ಹಾಗಿದ್ದರೇ ಏನಿದು ಕಮಿಷನ್ ದಂಧೆಯ ಅಸಲಿಯತ್ತು ಅಂತೀರಾ ಇಲ್ಲಿದೆ ನೋಡಿ ಸ್ಪೋಟಕ ಮಾಹಿತಿ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಮಿಷನ್ ಕರಾಳ ದಂಧೆ ದೊಡ್ಡಮಟ್ಟದಲ್ಲಿ ಬೇರು ಬಿಟ್ಟಿದೆ. ಇಲ್ಲಿ ಕೆಲಸ ಮಾಡುವ ಆಟೋ ಟಿಪ್ಪರ್ ಚಾಲಕರು ಕಮಿಷನ್ ಕೊಟ್ಟರೆ ಮಾತ್ರ ವೇತನ ಪಡೆಯುವಂತ ವ್ಯವಸ್ಥೆ ಇತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಸಭೆ ನಡೆಸಿ ಕಮಿಷನ್ ದಂಧೆಗೆ ಬ್ರೇಕ್ ಹಾಕಲು ಮುಂದಾಗಿತ್ತು. ಈ ಬೆನ್ನಲ್ಲೇ ಈಗ ಆಟೋ ಟಿಪ್ಪರ್ ಚಾಲಕರ ವೇತನಕ್ಕೆ ಹೊಡೆತ ಬಿದ್ದಿದೆ. ಕಮಿಷನ್ ಕೊಡದಿದ್ದರೇ ವೇತನ ಕೊಡಲ್ಲ ಎಂದು ಗುತ್ತಿಗೆದಾರರು ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸುತ್ತಿರುವ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಕಮಿಷನ್ ದಂಧೆಯ ಅಸಲಿಯತ್ತನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಯಲು ಮಾಡಿತ್ತು. ಈಗ ಮತ್ತೊಂದು ಮುಖದ ಅನಾವರಣ ಮಾಡುತ್ತಿದೆ.
ಇನ್ನೂ ಅವಳಿನಗರದ ಸ್ವಚ್ಚತೆಯ ಹಿನ್ನೆಲೆ 193 ಆಟೋ ಟಿಪ್ಪರ್ ಕಾರ್ಯನಿರ್ವಹಿಸುತ್ತಿದ್ದು, ಈ ಆಟೋ ಟಿಪ್ಪರ್ ಚಾಲಕರು ತಮ್ಮ ವೇತನ ಪಡೆಯಲು ಪ್ರತಿ ತಿಂಗಳು ಮೂರು ಸಾವಿರ ಕಮಿಷನ್ ಕೊಡಬೇಕಿದೆ. ಇನ್ನೂ ವೇತನದಲ್ಲಿ ಕೂಡ ಬಹುದೊಡ್ಡ ಹಗರಣವೇ ನಡೆದಿದ್ದು, ಚಾಲಕರಿಗೆ 22,505 ಬರಬೇಕಿರುವ ವೇತನ. ಆದರೆ ಅವರಿಗೆ ಬರುವುದು ಕೇವಲ 14 ಸಾವಿರ. ಅದರಲ್ಲೂ ಕೂಡ 3000 ಕಮಿಷನ್ ಮೊದಲೇ ಕಟ್ ಆಗುತ್ತಿತ್ತು. ಈಗ ಕಮಿಷನ್ ಕೊಡದಿದ್ದರೇ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಚಾಲಕರು ಕಮಿಷನ್ ಕರಾಳ ದಂಧೆಗೆ ಬೇಸತ್ತಿದ್ದಾರೆ. ಈ ಬಗ್ಗೆ ಪಾಲಿಕೆ ಮೇಯರ್ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಗುತ್ತಿಗೆದಾರರ ದೌರ್ಜನ್ಯಕ್ಕೆ ಆಟೋ ಟಿಪ್ಪರ್ ಚಾಲಕರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ವರ್ಷಗಳಿಂದ ಬೇರು ಬಿಟ್ಟಿರುವ ಕಮಿಷನ್ ದಂಧೆಗೆ ಬ್ರೇಕ್ ಹಾಕಬೇಕಿದ್ದ ಅಧಿಕಾರಿಗಳ ನಡೆ ಸಾಕಷ್ಟು ಅನುಮಾನ ಮೂಡಿಸಿದ್ದು, ಇನ್ನಾದರೂ ಈ ವ್ಯವಸ್ಥೆ ಬೇರು ಸಮೇತ ಕಿತ್ತೊಗೆಯುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
13/09/2022 02:55 pm