ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ದಿನಕ್ಕೊಂದು ನಿರ್ಧಾರ, ದಿನಕ್ಕೊಂದು ಬೆಳವಣಿಗೆ ನಡೆಯುತ್ತಲೇ ಇದೆ. ಈಗ ಕಾಂಗ್ರೆಸ್ ಪಾಳೆಯಲ್ಲಿ ಮತ್ತೆ ಭಿನ್ನಮತ ಸ್ಪೋಟಗೊಂಡಂತಾಗಿದ್ದು, ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ವಿಧಾನ ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್. ಆರ್. ಪಾಟೀಲ್ ಸಿದ್ಧರಾಗಿದ್ದಾರೆ.
ಹೌದು.ಪಕ್ಷದಲ್ಲಿ ಇದ್ದುಕೊಂಡು ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಪ್ರತ್ಯೇಕ ಟ್ಯಾಕ್ಟರ್ ರ‍್ಯಾಲಿ ನಡೆಸಲು ಎಸ್. ಆರ್. ಪಾಟೀಲ್ ಮುಂದಾಗಿದ್ದು, ಉತ್ತರ ಕರ್ನಾಟಕದ ನಿರಾವರಿ ಯೋಜನೆಗಳ ಅನುಷ್ಠಾನಕ್ಕೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ. ಗದಗ ಜಿಲ್ಲೆಯ ನರಗುಂದಿಂದ ಬೀಳಗಿ ವರೆಗೂ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ತೀರ್ಮಾನಿಸಿರುವ ಪಾಟೀಲ್, ಮಹದಾಯಿ, ಕೃಷ್ಣಾ ಯೋಜನೆಗಳ ಜಾರಿ, ತುಂಗಭದ್ರಾ, ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಟ್ರ್ಯಾಕ್ಟರ್ ರ‍್ಯಾಲಿ ಮಾಡುತ್ತಿದ್ದಾರೆ.
ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಟ್ರ್ಯಾಕ್ಟರ್ ರ‍್ಯಾಲಿ ಮಾಡಲು ಸಿದ್ಧತೆ ನಡೆಸಿರುವ ನಡುವೆಯೇ ಎಸ್.ಆರ್. ಪಾಟೀಲ್ ಟ್ರ್ಯಾಕ್ಟರ್ ರ‍್ಯಾಲಿ ಮಾಡಲು ಮುಂದಾಗಿದ್ದು,ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಹಿರಿಯ ನಾಯಕರ ನಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುವುದಂತೂ ಖಂಡಿತ.
ನಾಲ್ಕು ದಿನ ನಡೆಯುವ ಟ್ರ್ಯಾಕ್ಟರ್ ರ‍್ಯಾಲಿಗೆ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಹೆಸರಲ್ಲಿ ಶಕ್ತಿ ಪ್ರದರ್ಶನ ಎಂಬುವಂತೇ ನಾಮಕರಣ ಮಾಡಿದ್ದು, ಅನ್ನದಾತನ ಕೂಗು ಎಂಬ ಹೆಸರಲ್ಲಿ ಹೋರಾಟಕ್ಕೆ ಮುಂದಾದ ಪಾಟೀಲ್ ಅವರು, ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸಲು ಸಿದ್ದರಾಗಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರೈತ ಸಂಘಟನೆಗಳು, ಗುತ್ತಿ ಬಸವಣ್ಣ ಯೋಜನೆ ಹೋರಾಟ ಸಮಿತಿ, ಮಹದಾಯಿ ಹೋರಾಟಗಾರರ ಬೆಂಬಲದೊಂದಿಗೆ ಏಪ್ರಿಲ್ 13 ರಿಂದ 17 ರವರೆಗೆ ನಡೆಯುವ ರ‍್ಯಾಲಿಯಲ್ಲಿ ಬಾದಾಮಿ, ಕೂಡಲ ಸಂಗಮ, ಗಲಗಲಿ ಹಾಗೂ ಮುಧೋಳ ದಲ್ಲಿ ವಾಸ್ತವ್ಯ ಹೂಡಲಿದೆ. ಸುಮಾರು 200 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಿರುವ ಪಾಟೀಲ್, ತಮ್ಮನ್ನು ನಿರ್ಲಕ್ಷ್ಯ ಮಾಡಿರುವ ಕಾಂಗ್ರೆಸ್ ಗೆ ಪರೋಕ್ಷವಾಗಿ ತಮ್ಮ ಶಕ್ತಿ ತೋರಿಸಲು ಮುಂದಾಗಿದ್ದಾರೆ.
Kshetra Samachara
11/04/2022 04:10 pm