ಧಾರವಾಡ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಘೋಷಣೆ ಮಾಡಿದ್ದು, ಪ್ರತಿ ಮನೆಯ ಮೇಲೆ ಪಾಲಿಸ್ಟರ್ ಬಟ್ಟೆಯ ಧ್ವಜ ಹಾರಿಸುವುದಕ್ಕೆ ಗರಗ ಗ್ರಾಮದ ಖಾದಿ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು.
ಗರಗ ಗ್ರಾಮದಲ್ಲೇ ರಾಷ್ಟ್ರಧ್ವಜದ ಬಟ್ಟೆ ಸಿದ್ಧಪಡಿಸಲಾಗುತ್ತಿದ್ದು, ಖಾದಿ ಬಟ್ಟೆಯ ಧ್ವಜ ಬಿಟ್ಟು ಪಾಲಿಸ್ಟರ್ ಬಟ್ಟೆಯ ಧ್ವಜ ಹಾರಿಸುವುದು ಯಾವ ನ್ಯಾಯ? ಖಾದಿ ಬಟ್ಟೆಯ ಧ್ವಜಕ್ಕೆ ಇರುವಷ್ಟು ಮಾನ್ಯತೆ ಪಾಲಿಸ್ಟರ್ ಬಟ್ಟೆಯ ಧ್ವಜಕ್ಕೆ ಇಲ್ಲ ಹೀಗಾಗಿ ಇದಕ್ಕೆ ನಮ್ಮ ವಿರೋಧವಿದೆ. ನಾವು ಪಾಲಿಸ್ಟರ್ ಬಟ್ಟೆಯ ಧ್ಬಜ ಹಾರಿಸುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ಅಮೃತ ದೇಸಾಯಿ ಅವರು, ಗರಗ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಿದ್ದಾರೆ.
ಗರಗ ಖಾದಿ ಕೇಂದ್ರದ ಬಲವರ್ಧನೆಗೆ ನನ್ನ ಸಹಕಾರವಿದೆ. ಅದಕ್ಕೆ ಸರ್ಕಾರದಿಂದ ಬರಬೇಕಾದ ಎಲ್ಲ ಸವಲತ್ತುಗಳನ್ನು ತಂದು ಕೊಡುವಲ್ಲಿ ಶ್ರಮವಹಿಸುತ್ತೇನೆ. ಪ್ರಸಕ್ತ ವರ್ಷ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವಿದ್ದು, ಅದರ ಯಶಸ್ಸಿಗೆ ಎಲ್ಲರೂ ಕಾರಣಿಭೂತರಾಗಬೇಕು ಎಂದು ಶಾಸಕರು ಮನವಿ ಮಾಡಿದರು.
ಕೆಲಹೊತ್ತು ಮಾತುಕತೆ ನಡೆದ ಬಳಿಕ ಗರಗ ಗ್ರಾಮಸ್ಥರು ಹರ್ ಘರ್ ತಿರಂಗಾ ಯಶಸ್ವಿಗೊಳಿಸಲು ನಿರ್ಧರಿಸಿದರು. ಅಲ್ಲದೇ ಗ್ರಾಮ ಪಂಚಾಯ್ತಿ ವತಿಯಿಂದ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಠರಾವು ಪಾಸ್ ಮಾಡಲಾಯಿತು.
ಈ ಕುರಿತು ಪ್ರಕಟಣೆ ನೀಡಿದ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಕಾಶಿಗಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶಗಳ ಮೂಲಕ ಗರಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜವನ್ನು ಧ್ವಜಾರೋಹಣ ಮಾಡಲಾಗುವುದು.
ಗರಗ ಗ್ರಾಮದಲ್ಲಿ ಕೆಲವು ಗ್ರಾಮಸ್ಥರು ಹರ್ ಘರ್ ತಿರಂಗಾ ಅಭಿಯಾನ ಆಚರಿಸುವ ಕುರಿತು ಮನವಿ ಸಲ್ಲಿಸಿ ಖಾದಿ ಬಟ್ಟೆಯನ್ನು ಹೊರತು ಪಡಿಸಿ ಬೇರೆ ಬಟ್ಟೆಯಿಂದ ತಯಾರು ಮಾಡಿದ ಧ್ವಜವನ್ನು ಹಾರಿಸುವುದಿಲ್ಲ ಎಂದು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು. ಈ ಕುರಿತು ಸಭೆ ನಡೆಸಿ, ಚರ್ಚಿಸಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿ ಮಾಡಲು ಮನವೊಲಿಸಲಾಗಿದೆ ಎಂದು ತಿಳಿಸಿದ್ದಾರೆ.
Kshetra Samachara
11/08/2022 10:00 pm