ರಾಜ್ಯದಲ್ಲಿ ಮತ್ತೆ ಧರ್ಮದ ದಂಗಲ್ ಕಿಡಿ ಹೊತ್ತಿಕೊಂಡಿದ್ದು, ಅನಧಿಕೃತ ಮೈಕ್ ವಿರುದ್ಧ ಶ್ರೀರಾಮಸೇನೆ ನಡೆಸುತ್ತಿರುವ, ಸುಪ್ರಭಾತ ಅಭಿಯಾನದ ಎರಡನೇ ಭಾಗ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದೆ. ಬಿಜೆಪಿ ಶಾಸಕರು ಮತ್ತು ನಾಯಕರ ಕಚೇರಿ ಹಾಗೂ ನಿವಾಸದ ಮುಂದೆ, ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರಹಾಕಿ ಮತ್ತೊಂದು ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.
ಹೌದು. ರಾಜ್ಯದ ಮಸೀದಿಗಳ ಮೇಲೆ ಇರುವ ಅನಧಿಕೃತ ಮೈಕ್‌ಗಳ ತೆರವು ಹೋರಾಟದ ಪರಿಣಾಮವಾಗಿ ಹಿಂದೂ ಸಂಘಟನೆಗಳು ಹುಟ್ಟು ಹಾಕಿರುವ ಸುಪ್ರಭಾತ ಅಭಿಯಾನ ಎರಡನೇ ರೂಪ ಪಡೆದುಕೊಂಡಿದೆ. ಶ್ರೀರಾಮಸೇನೆ ಸರ್ಕಾರಕ್ಕೆ ನೀಡಿದ ಗಡುವು ಮುಗಿದ್ದರು ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತಿಲ್ಲ. ಇದರಿಂದ ಆಕ್ರೋಶಗೊಂಡ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯದ ಎಲ್ಲಾ ಬಿಜೆಪಿ ಶಾಸಕರ ಕಚೇರಿ ಎದುರು ಹೋರಾಟಕ್ಕೆ ಕರೆ ನೀಡಿದ್ದರು. ಈ ಪರಿಣಾಮ ರಾಜ್ಯದ ವಿವಿಧ ಕಡೆ ಎರಡನೇ ಹಂತದ ಹೋರಾಟ ಏಕಕಾಲದಲ್ಲಿ ಆರಂಭಗೊಂಡಿದೆ. ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಗದಗ ಸೇರಿದಂತೆ ವಿವಿಧ ಕಡೆ ಬಿಜೆಪಿ ಶಾಸಕರ ಕಚೇರಿ ಎದುರು ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶಾಸಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಇನ್ನು ಇದಕ್ಕೂ ಮುನ್ನ ಶ್ರೀರಾಮಸೇನೆ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂವಿಧಾನದ ಪ್ರಕಾರ ಶಾಂತಿಯುತ ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ನಮ್ಮ ಮನೆಯ ಎದುರು ಪ್ರತಿಭಟನೆ ಮಾಡಲು ನನ್ನ ಅಭ್ಯಂತರ ಏನು ಇಲ್ಲ. ಪ್ರತಿಭಟನೆ ಬಿಟ್ಟು ಮುತಾಲಿಕ್ ನನ್ನ ಜೊತೆಗೆ ಮಾತುಕತೆ ಬಂದರೆ ಚರ್ಚೆ ಸಿದ್ದ ಎಂದರು.
ಒಟ್ಟಿನಲ್ಲಿ ಸರ್ಕಾರ ಕೊಡಲ್ಲ, ಶ್ರೀರಾಮಸೇನೆ ಬಿಡಲ್ಲ ಎನ್ನುವಂತಿದೆ ಸದ್ಯದ ಪರಿಸ್ಥಿತಿ. ಈಗಾಗಲೇ ಅನಧಿಕೃತ ಮೈಕ್ ತೆರವಿಗೆ ಸರ್ಕಾರ ಗಡುವು ನೀಡಿದರು ಪ್ರಯೋಜನವಾಗಿಲ್ಲ. ಮತ್ತೊಂದು ಕಡೆ ಸರ್ಕಾರ ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದಾಗಿ ಆಕ್ರೋಶಗೊಂಡಿರುವ ಶ್ರೀರಾಮಸೇನೆ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈ ಹೋರಾಟ ರಾಜ್ಯದಲ್ಲಿ ಮತ್ತೇ ಯಾವ ವಿವಾದ ಹುಟ್ಟುಹಾಕುವುದೋ ಎಂಬುದನ್ನು ಕಾದುನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/06/2022 06:42 pm