ಧಾರವಾಡ: ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮದ ಸಂಬಂಧ ಸರ್ಕಾರದ ಗಮನಸೆಳೆಯಬೇಕು 56 ಸಾವಿರ ಜನ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದ್ದು, ಇದರ ಬಗ್ಗೆ ಸದನದಲ್ಲಿ ಮಾತನಾಡಬೇಕು ಎಂದು ಕೆಲ ಅಭ್ಯರ್ಥಿಗಳು ಮನವಿ ಮಾಡಿದರೆ, 545 ಜನ ಅಭ್ಯರ್ಥಿಗಳು ನ್ಯಾಯಯುತವಾಗಿ ಪರೀಕ್ಷೆ ಬರೆದಿದ್ದು, ಇವರಿಗೆ ನೇಮಕಾತಿ ಆದೇಶ ನೀಡಬೇಕು ಮರು ಪರೀಕ್ಷೆ ನಡೆಸಬಾರದು ಎಂದು ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಕೆಲ ಅಭ್ಯರ್ಥಿಗಳು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಕುಮಾರಸ್ವಾಮಿ ಅವರು ಐವತ್ತಾರೂ ಸಾವಿರ ಜನರಿಗೆ ಅನ್ಯಾಯವಾಗಿಲ್ಲ. 545 ಜನ ಅಭ್ಯರ್ಥಿಗಳ ಪರ ಸರ್ಕಾರದ ಗಮನಸೆಳೆಯುತ್ತೇನೆ ಎಂದಿದ್ದೇ ಗದ್ದಲಕ್ಕೆ ಕಾರಣವಾಯಿತು.
ಕವಿವಿಯ ಅತಿಥಿ ಉಪನ್ಯಾಸಕರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿಗೆ ಕುಮಾರಸ್ವಾಮಿ ಅವರು ಬೆಂಬಲ ಸೂಚಿಸಲು ಬಂದಿದ್ದ ವೇಳೆ ಪಿಎಸ್‌ಐ ಅಕ್ರಮ ನೇಮಕಾತಿ ವಿರುದ್ಧ ಧ್ವನಿ ಎತ್ತಿದ ಅಭ್ಯರ್ಥಿಗಳು ಹಾಗೂ ಈಗಾಗಲೇ ಪರೀಕ್ಷೆ ಬರೆದು ಪಾಸಾದ ಅಭ್ಯರ್ಥಿಗಳು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು.
ಐವತ್ತಾರೂ ಸಾವಿರ ಜನ ಅಭ್ಯರ್ಥಿಗಳಿಗೆ ಅನ್ಯಾಯವಾಗಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರಿಂದ ಅಕ್ರಮ ನೇಮಕಾತಿ ವಿರುದ್ಧದ ಅಭ್ಯರ್ಥಿಗಳು ಕುಮಾರಸ್ವಾಮಿ ಅವರ ವಿರುದ್ಧವೇ ಧಿಕ್ಕಾರ ಕೂಗಲಾರಂಭಿಸಿದರು. ಅಲ್ಲದೇ ಅವರ ಕಾರಿಗೆ ಬೆನ್ನತ್ತಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಇದರಿಂದ ಕೆಲವರು ಪೊಲೀಸರಿಂದ ಗೂಸಾ ಸಹ ತಿಂದರು.
ಈಗಾಗಲೇ ನ್ಯಾಯಯುತವಾಗಿ ಪರೀಕ್ಷೆ ಬರೆದು, ಸಿಐಡಿ ತನಿಖೆಯನ್ನೂ ನಾವು ಎದುರಿಸಿದ್ದೇವೆ. ಹೀಗಾಗಿ ಯಾವುದೇ ಮರು ಪರೀಕ್ಷೆ ನಡೆಸದೇ ನೇಮಕಾತಿ ಆದೇಶ ನೀಡಬೇಕು. ನ್ಯಾಯಯುತವಾಗಿ ಪರೀಕ್ಷೆ ಬರೆದ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಫೇಲಾದ ಕೆಲವರು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಪಿಎಸ್ಐ ಪರೀಕ್ಷೆ ಪಾಸಾದ ಅಭ್ಯರ್ಥಿ ನವೀನ ಹಳೇಮನಿ ಆರೋಪಿಸಿದರು.
ಕುಮಾರಸ್ವಾಮಿ ಅವರಿಗೆ ನಾವು ಶಾಂತರೀತಿಯಿಂದ ಮನವಿ ಸಲ್ಲಿಸಲು ಬಂದಿದ್ದೆವು ಆದರೆ, ಅವರು ಕಾರು ನಿಲ್ಲಸದೇ ಹೋಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಕೇವಲ 545 ಜನರಷ್ಟೇ ಕಾಣುತ್ತಿದ್ದಾರಾ? 56 ಸಾವಿರ ಕುಟುಂಬಗಳು ಕಾಣುತ್ತಿಲ್ಲವೇ ಎಂದು ಪಿಎಸ್ಐ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/06/2022 08:16 pm