ಧಾರವಾಡ: ಮೇಕೆದಾಟು ನೀರಿನ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬರಬಾರದು. ನಮ್ಮ ರಾಜ್ಯದ ಹಕ್ಕನ್ನು ಎಲ್ಲರೂ ಒಂದಾಗಿ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ನಮ್ಮ ರಾಜ್ಯದ ಹಕ್ಕಿದೆ. ಅದನ್ನು ಎಲ್ಲರೂ ಸೇರಿ ಪಡೆದುಕೊಳ್ಳಬೇಕು. ಅದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ ಎಂದರು.
2018ರಲ್ಲಿ ಸಭಾಪತಿಯಾದ ನಂತರ ಯಾವುದೇ ಶಾಲೆಗಳಿಗೆ ಭೇಟಿ ನೀಡಲು ಆಗಿರಲಿಲ್ಲ. ಆದರೆ, ಈಗ ಬಿಡುವು ಮಾಡಿಕೊಂಡು ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಧಾರವಾಡ ಗ್ರಾಮೀಣ ಭಾಗದ 10 ಶಾಲೆಗಳಿಗೆ ಭೇಟಿ ನೀಡಿ ನನ್ನ ಮತದಾರರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದರು.
ಅತಿಥಿ ಉಪನ್ಯಾಸಕರನ್ನು ಕಾಯಂ ಶಿಕ್ಷಕರನ್ನಾಗಿ ಮಾಡಿಕೊಳ್ಳಲು ಬರುವುದಿಲ್ಲ. ಅದರಲ್ಲಿ ಕಾನೂನು ತೊಡಕು ಇದೆ. 10 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳಬೇಕು ಎಂದು ನಾವು ಆಗ್ರಹಿಸಿದ್ದೆವು. ಅದು ಆಗಲಿಲ್ಲ. ಸದ್ಯ ಇರುವ 14,500 ಜನ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆಯುವುದಿಲ್ಲ. ಆದರೆ, ವರ್ಕ ಲೋರ್ಡನಿಂದಾಗಿ 2-3 ಸಾವಿರ ಶಿಕ್ಷಕರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಮುಂದೆ ಹುದ್ದೆಗಳು ಖಾಲಿ ಆದಂತೆ ಆ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲಾಗುವುದು. ಈಗ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಪ್ರಕ್ರಿಯೆ ನಡೆದಿದ್ದು, ಸಿಎಂ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಅತಿಥಿ ಉಪನ್ಯಾಸಕರನ್ನು ಯಾವ ರೀತಿ ಪರಿಗಣಿಸಬೇಕು ಎಂಬುದರ ಕುರಿತು ಕಾನೂನು ಸಲಹೆ ಪಡೆದುಕೊಳ್ಳಲಾಗುವುದು ಎಂದರು.
ನೈಟ್ ಕರ್ಫ್ಯೂ ಮಾಡುವುದರಿಂದ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ. ಜನರೇ ಎಚ್ಚೆತ್ತುಕೊಂಡು ಜಾಗೃತರಾಗಿರಬೇಕು. ಕೆಲವೊಮ್ಮೆ ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳು ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತವೆ. ಜನ ಎಚ್ಚೆತ್ತುಕೊಂಡು ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/01/2022 05:53 pm