ಧಾರವಾಡ: ಹಿರಿಯ ನಾಗರಿಕರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ತೊಂದರೆಯಲ್ಲಿರುವ ಹಿರಿಯರಿಗೆ ಎಲ್ಲ ರೀತಿಯ ಬೆಂಬಲಿವಿದೆ. ಇಂದಿನ ಯುವ ಪೀಳಿಗೆಯು ಹಿರಿಯರಿಂದ ಸಿಗುವ ಜ್ಞಾನ, ಸಲಹೆ ಸೂಚನೆಗಳನ್ನು ಪಡೆದುಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆ ಮತ್ತು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಸೂಕ್ತ ರಕ್ಷಣೆ ಮತ್ತು ಪಾಲನೆ ಪೋಷಣೆಗಾಗಿ ವಿವಿಧ ಇಲಾಖೆಗಳಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು. ಸಮಾಜಕ್ಕೆ ಹಿರಿಯ ನಾಗರಿಕರ ಮಾರ್ಗದರ್ಶನ ಅವಶ್ಯಕವಾಗಿದೆ. ನಮ್ಮ ಬದುಕಿಗೆ ದಾರಿ ಮಾಡಿಕೊಟ್ಟ ಹಿರಿಯ ನಾಗರಿಕರ ಕೊನೆಗಾಲದ ಬದುಕನ್ನು ಹಸನುಗೊಳಿಸುವುದು ಪ್ರತಿಯೊಬ್ಬ ಯುವಜನರ ಕರ್ತವ್ಯ. ಇದನ್ನು ಮನಗಂಡು ನಮ್ಮ ಹಿರಿಯರನ್ನು ಕಾಳಜಿಯಿಂದ ನೋಡಿಕೊಳ್ಳೋಣ ಎಂದು ಹೇಳಿದರು.
ನಿವೃತ್ತ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಅವರು ಮಾತನಾಡಿ, ಹಿರಿಯ ನಾಗರಿಕರಿಗೆ ಕಾನೂನಾತ್ಮಕ ರಕ್ಷಣೆಯಿದೆ. ಕುಟುಂಬದಿಂದ ವಂಚಿತರಾದರೆ ನ್ಯಾಯವನ್ನು ಕೇಳುವ ಹಕ್ಕು ಇದೆ. ಹಿರಿಯರ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರಕ್ಕಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. 2021-2022 ರಲ್ಲಿ ಕಿರುಕುಳಕ್ಕೊಳಗಾದ, ಆರ್ಥಿಕವಾಗಿ ಶೋಷಿಸಲ್ಪಟ್ಟ 36 ವೃದ್ಧರನ್ನು ರಕ್ಷಣೆ ಮಾಡಲಾಗಿದೆ ಎಂದರು.
ಹುಬ್ಬಳ್ಳಿಯ ಸರ್ಕಾರಿ ಅಂಧ ಮಕ್ಕಳ ಶಾಲೆಯ ಮಕ್ಕಳು ಹಾಗೂ ಗೌಡೇಶ ಪವಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಸನ್ಮಾನಿಸಿ, ಗೌರಾವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಹೆಚ್.ಹೆಚ್. ಕುಕನೂರ ಸ್ವಾಗತಿಸಿದರು. ಅಂಧ ಬಾಲಕರ ಸರ್ಕಾರಿ ಪಾಠಶಾಲೆಯ ಶಿಕ್ಷಕ ಅಣ್ಣಪ್ಪ ಕೋಳಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಸಮಿತಿಯ ಸದಸ್ಯರಾದ ಬಿ.ಎ.ಪಾಟೀಲ, ಲೀಲಾ ಹಿರೇಮಠ, ಐ.ಕೆ.ಲಕ್ಕುಂಡಿ, ಧಾರವಾಡ ಜಿಲ್ಲಾ ನಿವೃತ್ತರ ಸಂಘದ ಅಧ್ಯಕ್ಷ ವಿ.ಬಿ.ಮತ್ತೂರ ಸೇರಿದಂತೆ ಜಿಲ್ಲೆಯ ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.
Kshetra Samachara
01/10/2022 09:51 pm