ಹುಬ್ಬಳ್ಳಿ: ಅವರೆಲ್ಲರೂ ಕಾನೂನು ಸೇವೆ ಹಾಗೂ ಅರಿವಿನಿಂದ ತುಂಬಾ ದೂರ ಉಳಿದವರು. ವಿಭಿನ್ನ ಜೀವನ ಶೈಲಿಯಲ್ಲಿ ಬದುಕು ನಡೆಸುವ ಅವರು ಯಾವುದೇ ಸೇವೆಗಳಿಗೂ ಸರದಿಯಲ್ಲಿ ನಿಲ್ಲದವರು. ಅಂತವರಿಗೆ ಈಗ ಹುಬ್ಬಳ್ಳಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲಾಯಿತು.
ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾನೂನು ಅರಿವು, ಆರೋಗ್ಯ ತಪಾಸಣೆ ಮೂಲಕ ವಿನೂತನ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಲಿಂಗತ್ವ ಅಲ್ಪಸಂಖ್ಯಾತರ ಹಿತ ಕಾಪಾಡುವ ಮಸೂದೆ 2012ರಲ್ಲಿ ಅಂಗೀಕಾರವಾಗಿದ್ದರೂ ಅನುಷ್ಠಾನಗೊಳಿಸದ ಹಿನ್ನೆಲೆಯಲ್ಲಿ ಸೌಲಭ್ಯದಿಂದ ವಂಚಿತರಾಗುತ್ತಿದ್ದು, ಮಸೂದೆ ಅನಷ್ಠಾನ ಹಾಗೂ ಈ ಆಯ-ವ್ಯಯದಲ್ಲಿ ವಸತಿ ಹಾಗೂ ಇನ್ನಿತರೆ ಸೌಲಭ್ಯ ಕಲ್ಪಿಸಲು ರಾಜ್ಯ ಸರಕಾರ 300 ಕೋಟಿ ರೂ. ಮೀಸಲಿಡಬೇಕು ಎಂದು ಜೀವ ಸಂಘಟನೆಯ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರ ಮಲ್ಲಣ್ಣ ಕುಂಬಾರ ಹೇಳಿದರು.
ಇಲ್ಲಿನ ಮೆಟ್ರೊ ಪೊಲೀಸ್ ಹೋಟೆಲ್‌ನಲ್ಲಿ ಜೀವ, ಸಾಮರ್ಥ್ಯ ಸಂಸ್ಥೆಯಿಂದ ಜಿಲ್ಲಾ ಮಟ್ಟದ ಲಿಂಗತ್ವ ಅಲ್ಪಸಂಖ್ಯಾತರ ವಕಾಲತ್ತು ಹಾಗೂ ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ಆರೋಗ್ಯ ತಪಾಸಣೆ, ಉಡುಗೊರೆ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಇನ್ನೂ ಫೌಂಡೇಶನ್ ಸಂಸ್ಥಾಪಕ ರಜತ ಉಳ್ಳಾಗಡ್ಡಿಮಠ ಮಾತನಾಡಿ, ನೆರೆಯ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ 3000 ರೂ. ಮಾಸಿಕ ಗೌರವಧನ ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಹಿಂದಿನ ಸಿದ್ದರಾಮಯ್ಯ ಅವರ ಸರಕಾರ ಜಾರಿ ಮಾಡಿದ್ದ 600ರೂ. ಇಂದಿಗೂ ನೀಡಲಾಗುತ್ತಿದೆ. ಇವರ ಶ್ರೇಯೋಭಿವೃದ್ಧಿಗಾಗಿ ಸರಕಾರ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು. ಆಶ್ರಯ ಮನೆ ಹಂಚಿಕೆ ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ನಿಮ್ಮೊಂದಿಗೆ ಹೋರಾಡಲು ಫೌಂಡೇಶನ್ ಸಿದ್ಧವಿದೆ ಎಂದರು.
Kshetra Samachara
23/02/2022 11:02 pm