ಧಾರವಾಡ: ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಧಾರವಾಡ ಮನೆ ಮುಂದಿನ ಬಾವಿ ಕಾಣೆಯಾಗಿದ್ದು, ಅದನ್ನು ಹುಡುಕಿಕೊಡುವಂತೆ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಧಾರವಾಡ ಉಪನಗರ ಠಾಣೆಗೆ ದೂರು ನೀಡಿದ್ದಾರೆ.
ಧಾರವಾಡದ ಸರ್ವೆ ನಂಬರ್ 31/1ರಲ್ಲಿ ಸಾರ್ವಜನಿಕ ಬಾವಿ ಇತ್ತು. ಅಲ್ಲಿಯೇ ಶಾಸಕ ಅರವಿಂದ ಬೆಲ್ಲದ ಅವರ ನಿವಾಸವಿದ್ದು, ಜೋತಿಷ್ಯ ಕೇಳಿ ಬೆಲ್ಲದ ಅವರು ಆ ಬಾವಿಯನ್ನು ಮುಚ್ಚಿ ಅಲ್ಲಿ ಫೇವರ್ಸ್ ಹಾಕಿಕೊಂಡಿದ್ದಾರೆ. ಆ ಬಾವಿ ಮುಚ್ಚಿದರೆ, ನೀವು ಸಿಎಂ ಆಗುತ್ತೀರಿ ಎಂದು ಯಾರೋ ಬೆಲ್ಲದ ಅವರಿಗೆ ಭವಿಷ್ಯ ಹೇಳಿದ್ದರಂತೆ ಹೀಗಾಗಿ ಬೆಲ್ಲದ ಅವರು ಆ ಬಾವಿ ಮುಚ್ಚಿಸಿದ್ದಾರೆ ಎಂದು ಅಲ್ಲಿನ ಅಕ್ಕಪಕ್ಕದ ನಿವಾಸಿಗಳು ಆರೋಪಿಸಿದ್ದಾರೆ ಎಂದು ಗೌರಿ ತಿಳಿಸಿದ್ದಾರೆ.
ಬಾವಿ ಹುಡುಕಿಕೊಡುವಂತೆ ಮಹಾನಗರ ಪಾಲಿಕೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆಯೇ ಈ ಬಾವಿಯನ್ನು ಶಾಸಕರು ಮುಚ್ಚಿಸಿದ್ದಾರೆ. ಹೀಗಾಗಿ ಪೊಲೀಸರು ಈ ಬಾವಿಯನ್ನು ಹುಡುಕಿಕೊಡಬೇಕು ಎಂದು ಗೌರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾರ್ವಜನಿಕರ ಆಸ್ತಿ ಪತ್ತೆ ಮಾಡದೇ ಹೋದಲ್ಲಿ ಲೋಕಾಯುಕ್ತಕ್ಕೂ ದೂರು ನೀಡುವುದಾಗಿ ಗೌರಿ ಎಚ್ಚರಿಸಿದ್ದಾರೆ.
Kshetra Samachara
03/10/2022 07:30 pm