ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಹಾಯಕ ಪ್ರಾಧ್ಯಾಪಕಿಯನ್ನು ಹೊರಗಿಟ್ಟ ಕವಿವಿ: ಇದು ಹೈಕೋರ್ಟ್ ಆದೇಶ ಅಂದ್ರು ವಿಸಿ

ಧಾರವಾಡ: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಗೋಲ್ ಮಾಲ್ ನಡೆದಿತ್ತಾ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಈಗ ಮತ್ತೇ ಸುದ್ದಿಯಲ್ಲಿದೆ. ಕಳೆದ ವಾರವಷ್ಟೇ ಇದೇ ಕವಿವಿ ಮೌಲ್ಯಮಾಪನ ಕುಲಸಚಿವ ನಾಗರಾಜ್ ಅವರನ್ನು ಸಿಐಡಿ ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿತ್ತು. ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪ್ರಶ್ನೆ ಪತ್ರಿಕೆ ವಿಷಯದಲ್ಲಿ ಈ ನಾಗರಾಜ್ ಬಂಧನಕ್ಕೆ ಒಳಗಾಗಿದ್ದರು. ಈಗ ಇದೇ ಕವಿವಿಯ ಮತ್ತೊಬ್ಬ ಸಹಾಯಕ ಪ್ರಾಧ್ಯಾಪಕಿಗೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸೇವೆಯಿಂದ ಬಿಡುಗಡೆ ಮಾಡಿದೆ. ಶ್ರೀದೇವಿ ಎನ್ನುವ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕಿ ಕಳೆದ 2014 ರಲ್ಲಿ ನೇಮಕವಾಗಿದ್ದರು.

ಆದರೆ ಇವರು ಕೋರ್ಸ್ ವರ್ಕ್ ಮುಗಿಸದೇ ನೇಮಕವಾಗಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಹೀಗಾಗಿ ಇದನ್ನು ಪ್ರಶ್ನಿಸಿ ಮಂಜುನಾಥ ಹಿರೇಮಠ ಎನ್ನುವವರು ಹೈಕೋರ್ಟ್ ಮೇಟ್ಟಿಲೇರಿದ್ದರು. ಈಗ ಧಾರವಾಡ ಹೈಕೋರ್ಟ್ ಶ್ರೀದೇವಿ ಅವರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಿದೆ. ಆ ಪ್ರಕಾರ ಕವಿವಿ ಆಡಳಿತ ಮಂಡಳಿ ಇವರನ್ನು ಸೇವೆಯಿಂದ ಬಿಡುಗಡೆ ಮಾಡಿದೆ. ಆದರೆ ನನಗೆ ಮೇಲ್ಮನವಿ ಸಲ್ಲಿಸಲು 3 ತಿಂಗಳ ಅವಕಾಶ ಇದ್ದರೂ ಸೇವೆಯಿಂದ ಬಿಡುಗಡೆ ಮಾಡಿದ್ದಾರೆ ಎಂದು ಶ್ರೀದೇವಿ ಕವಿವಿ ಮೇಲೆ ಆರೋಪಿಸಿದ್ದಾರೆ.

ನನ್ನ ಕೋರ್ಸ್ ವರ್ಕ್ 2009 ರಲ್ಲಿ ಆರಂಭವಾಗಿದ್ದು, ಕವಿವಿ 2010 ರಲ್ಲಿ ಕೋರ್ಸ್ ವರ್ಕ್ ತಂದಿದೆ ಎಂದು ಶ್ರೀದೇವಿ ಹೇಳುತ್ತಾರೆ. ಹೀಗಾಗಿ ತಮ್ಮನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು ತಪ್ಪು ಎಂದು ಹೇಳುತ್ತಿದ್ದಾರೆ. ಆದರೆ ಕವಿವಿ ಕುಲಪತಿ, ನ್ಯಾಯಾಲಯದ ಆದೇಶ ಇರುವ ಕಾರಣ ಸಹಾಯಕ ಪ್ರಾಧ್ಯಾಪಕಿಗೆ ಸೇವೆಯಿಂದ ಬಿಡುಗಡೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಅಲ್ಲದೇ ನಾವು ಸೇವೆಯಿಂದ ಬಿಡುಗಡೆ ಮಾಡದೇ ಇದ್ದರೆ, ನ್ಯಾಯಾಂಗ ನಿಂದನೆ ಆಗುತ್ತದೆ. ಇದು ಕೇವಲ ನನ್ನ ಆದೇಶ ಅಲ್ಲ, ಇಡೀ ಆಡಳಿತ ಮಂಡಳಿ ಹಾಗೂ ಸಿಂಡಿಕೇಟ್ ಸದಸ್ಯರ ನಿರ್ಧಾರ ಎಂದು ಕುಲಪತಿ ಹೇಳಿದ್ದು, ಶ್ರೀದೇವಿ ಅವರು ಸುಪ್ರೀಂ ಕೋರ್ಟ್‌ಗೆ ಹೋಗಲು ಅವಕಾಶ ಇದೆ ಎಂದಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕದ ಮೇಲೆ ಪ್ರಶ್ನೆ ಎದ್ದಾಗಲೇ, ಕವಿವಿಯಲ್ಲೂ ಕೂಡ ಸಹಾಯಕ ಪ್ರಾಧ್ಯಾಪಕಿಗೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಈ ಹೈಕೋರ್ಟ್ ಆದೇಶದ ವಿರುದ್ಧ ಸಹಾಯಕ ಪ್ರಾಧ್ಯಾಪಕಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದು, ಮುಂದಿನ ಆದೇಶದವೆರೆಗೂ ಶ್ರೀದೇವಿ ಕವಿವಿಯಿಂದ ಹೊರಗೆ ಇರಬೇಕಾಗಿದೆ.

Edited By :
Kshetra Samachara

Kshetra Samachara

12/05/2022 05:33 pm

Cinque Terre

48.74 K

Cinque Terre

1

ಸಂಬಂಧಿತ ಸುದ್ದಿ