ಹುಬ್ಬಳ್ಳಿ: ಯಾವುದಾದರೂ ಚುನಾವಣೆ ಬಂದ್ರೆ ಲಕ್ಷಗಟ್ಟಲೆ ಕರ ಸಂಗ್ರಹ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೇ ಈ ಚುನಾವಣೆ ಬಂದ್ರೇ ಸಾಕು ಗ್ರಾಮೀಣ ಮಟ್ಟದಲ್ಲಿ ಕೂಡ ಲಕ್ಷಗಟ್ಟಲೆ ತೆರಿಗೆ ಪಾವತಿಯಾಗುತ್ತದೆ.ವರ್ಷವಿಡೀ ತೆರಿಗೆ ತುಂಬುವಂತೆ ಅಧಿಕಾರಿಗಳು ದುಂಬಾಲು ಬಿದ್ದರೂ ಕೂಡ ಸಂಗ್ರಹವಾಗದ ತೆರಿಗೆ ಏಕಾಏಕಿ ಪಾವತಿಯಾಗುತ್ತದೆ. ಅಷ್ಟಕ್ಕೂ ಲಕ್ಷಗಟ್ಟಲೆ ತೆರಿಗೆ ಪಾವತಿಯಾಗಿದ್ದಾದರೂ ಯಾಕೆ ಅಂತೀರಾ ಈ ಸ್ಟೋರಿ ನೋಡಿ...
ಮನೆ, ವಾಣಿಜ್ಯ ಕಟ್ಟಡ, ಜಾಗದ ತೆರಿಗೆ, ಕುಡಿಯುವ ನೀರು ಸರಬರಾಜಿನ ಶುಲ್ಕಕ್ಕಾಗಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಜನರ ಮನೆ, ಮನೆಗೆ ಅಲೆದಾಡುತ್ತಿದ್ದರು. ಈಗ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೇ ತೆರಿಗೆ ಪಾವತಿಗಾಗಿ ಗ್ರಾಮ ಪಂಚಾಯ್ತಿಗೆ ಅಲೆದಾಡುತ್ತಿದ್ದಾರೆ. ಹೀಗಾಗಿ, ಲಕ್ಷಾಂತರ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ.ಹೌದು...ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸುವ ಅಭ್ಯರ್ಥಿ ಕಡ್ಡಾಯವಾಗಿ ಎಲ್ಲ ತೆರಿಗೆಗಳ ಪಾವತಿ ಮಾಡಿರಬೇಕು. ಯಾವುದೇ ಬಾಕಿಯನ್ನು ಉಳಿಸಿಕೊಂಡಿರುವಂತಿಲ್ಲ. ಬಾಕಿ ಉಳಿಸಿಕೊಂಡಿದ್ದರೆ, ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗುತ್ತದೆ.ಈ ಹಿನ್ನೆಲೆಯಲ್ಲಿ ಗ್ರಾಮೀಣ ಮಟ್ಟದಲ್ಲಿ ಲಕ್ಷಗಟ್ಟಲೆ ಕರ ಪಾವತಿಯಾಗುತ್ತಿದೆ.
ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿರುವ ಅಭ್ಯರ್ಥಿಗಳು 300 ರಿಂದ ಹಿಡಿದು ಸಾವಿರಾರು ರೂಪಾಯಿವರೆಗಿನ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಕೆಲವರು ಕುಡಿಯುವ ನೀರಿನ ಶುಲ್ಕವನ್ನು ಹಲವಾರು ವರ್ಷಗಳಿಂದ ಪಾವತಿಸಿರಲಿಲ್ಲ. ಅಂತಹವರು ಈಗ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಸಾಲುಗಟ್ಟಿ ಶುಲ್ಕ ತುಂಬುತ್ತಿದ್ದಾರೆ.
ಚುನಾವಣಾ ಆಯೋಗ ತೆರಿಗೆ ಪಾವತಿ ಬಾಕಿ ಇರಬಾರದು ಎಂದು ಸೂಚಿಸಿರುವುದರಿಂದ 1,000 ದಿಂದ ಹಿಡಿದು 2,000ರ ವರೆಗಿನ ಮೊತ್ತವನ್ನು ನೂರಾರು ಜನರು ಪಾವತಿ ಮಾಡಿದ್ದಾರೆ.
ಶೌಚಾಲಯ ಹೊಂದಿರುವುದನ್ನು ಚುನಾವಣಾ ಆಯೋಗ ಕಡ್ಡಾಯಗೊಳಿಸಿಲ್ಲ. ಆದರೆ, ಆಯ್ಕೆಯಾದ ಆರು ತಿಂಗಳ ಒಳಗೆ ಶೌಚಾಲಯ ಕಟ್ಟಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.ಅಭ್ಯರ್ಥಿಗಳಾಗುವವರು ಕಡ್ಡಾಯವಾಗಿ ಆಯ್ಕೆಯಾದ ಆರು ತಿಂಗಳ ಒಳಗೆ ಶೌಚಾಲಯ ಕಟ್ಟಿಸಿಕೊಳ್ಳುವುದಾಗಿ ಪತ್ರ ನೀಡಬೇಕಿದೆ.
ಒಟ್ಟಿನಲ್ಲಿ ನನೆಗುದಿಗೆ ಬಿದ್ದಿದ್ದ ತೆರಿಗೆ ವಸೂಲಿ ಕಾರ್ಯ ಗ್ರಾಮ ಪಂಚಾಯತಿ ಚುನಾವಣೆ ಬಂದಿದ್ದೇ ತಡ ಏಕಾಏಕಿ ಸಂಗ್ರಹವಾಗುತ್ತಿದೆ.
Kshetra Samachara
12/12/2020 07:02 pm