ಧಾರವಾಡ: ವಿಧಾನ ಪರಿಷತ್ ಸಭೆಯನ್ನು ಡಿ.15 ರವರೆಗೆ ಮುಂದುವರೆಸುವ ಅಥವಾ ಡಿ. 15 ರಂದು ಕರೆಯುವ ಕುರಿತು ಸರಕಾರದ ಕಾರ್ಯದರ್ಶಿಗಳು ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದು ಇದೇ ಮೊದಲು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಭೆ ರಾಜ್ಯ ಸರಕಾರ ನಿಗದಿ ಮಾಡಿದ ಕಾರ್ಯಕಲಾಪಗಳ ಪಟ್ಟಿಯಂತೆ ಡಿ. 15 ರವರೆಗೆ ನಡೆಯಬೇಕಿತ್ತು. ಆದರೆ, ಇದು ವಿಧಾನ ಪರಿಷತ್ತಿನ ಸಲಹಾ ಸಮಿತಿಯಲ್ಲಿ ಸಭಾಪತಿಗಳು ತೀರ್ಮಾನ ಕೈಗೊಳ್ಳಲು ಅನುವು ಮಾಡಿಕೊಳ್ಳದ ಕಾರಣ ಸಭೆಯನ್ನು ಈ ಹಿಂದೆ ನಿಗದಿ ಮಾಡಿದಂತೆ ಡಿ. 15 ರವರೆಗೆ ಅಥವಾ ಡಿ. 15 ರಂದು ಬೆಳಿಗ್ಗೆ 10.30ಕ್ಕೆ ಸಭೆ ನಡೆಸುವಂತೆ ಪರಿಷತ್ ಕಾರ್ಯದರ್ಶಿಗಳಿಗೆ ಸರಕಾರದ ಕಾರ್ಯದರ್ಶಿಗಳು ಪತ್ರದಲ್ಲಿ ಸೂಚಿಸಿದ್ದಾರೆ ಎಂದರು.
ಸಭೆಯಲ್ಲಿ ಸಭಾಪತಿ ವಿರುದ್ಧ ನೀಡಲಾದ ಅವಿಶ್ವಾಸ ನಿರ್ಣಯದ ಸೂಚನೆಯ ಕುರಿತು ಚರ್ಚಿಸಲು ಅನುವು ಮಾಡಿಕೊಳ್ಳಲು ಸೂಚಿಸಲಾಗಿದೆ. ಆದರೆ, ತಾಂತ್ರಿಕವಾಗಿ ಈ ಸಭೆ ನಡೆಸುವುದು ಕಷ್ಟಸಾಧ್ಯ. ಸಭಾಪತಿಗಳ ವಿರುದ್ಧ ಅವಿಶ್ವಾಸ ಉಂಟಾದಾಗ ಅವರು ಉಪಾಧ್ಯಕ್ಷರಿಗೆ ಅಧಿಕಾರ ನೀಡಿ ಸಭೆ ನಡೆಸಬೇಕಿತ್ತು. ಆದರೆ, ಸಭಾಪತಿ ಸ್ಥಾನವು ಸಂವಿಧಾನಾತ್ಮಕ ಹುದ್ದೆ. ಅವರ ನಿರ್ಣಯ ಸರಿ-ತಪ್ಪು ಎನ್ನಲಾರೆ.
ಬಿಜೆಪಿ 12 ಸದಸ್ಯರು ಅವಿಶ್ವಾಸ ಕೊಟ್ಟಾಗ ಸಭಾಪತಿ ಅವರು ಉಪಾಧ್ಯಕ್ಷರಿಗೆ ಸದನ ಬಿಟ್ಟು ಕೊಡಬೇಕಿತ್ತು. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಈ ಹಿಂದೆ ಬಿಲ್‌ವೊಂದರ ಚರ್ಚೆ ನಡೆಸಿದಾಗ ಮುಗಿಯುವರೆಗೂ ಸಭೆ ನಿಲ್ಲಿಸಬಾರದು. ಆದರೆ, ಬಿಲ್‌ವೊಂದರ ಚರ್ಚೆ ನಡೆದಾಗ ಸಭೆ ನಿಲ್ಲಿಸಿದ್ದರು. ಹೀಗಾಗಿಯೇ ಅವರ ವಿರುದ್ಧ ಅವಿಶ್ವಾಸ ವ್ಯಕ್ತವಾಗಿದೆ. ಅದಕ್ಕೆ ನಾವು ಬೆಂಬಲಿಸಿದ್ದೇವೆ ಎಂದು ಹೇಳಿದರು.
ಗೋ ಹತ್ಯೆ ನಿಷೇಧ ಕಾಯ್ದೆ ಪರಿಷತ್‌ನಲ್ಲಿ ಚರ್ಚೆಯಾಗಿಲ್ಲ. ಗೋ ಹತ್ಯೆಗೆ ಅನೇಕ ಕಾರಣಗಳಿವೆ. ಈಗಿನ ಕಾಯ್ದೆ ಸಾಧಕ ಬಾಧಕ ಏನಿದೆ ಎಂಬುದನ್ನು ನೋಡಬೇಕು. ಉತ್ತರ ಪ್ರದೇಶದಲ್ಲಿ 1500 ಗೋ ಶಾಲೆಗಳಿವೆ. ಆದರೆ, ನಮ್ಮಲ್ಲಿ ಗೋ ಶಾಲೆಗಳಿಲ್ಲ. ಕಾಯ್ದೆ ತರುವ ಮುಂಚೆ ಸರಕಾರ ಪೂರ್ವ ತಯಾರಿ ಮಾಡಬೇಕಿತ್ತು. ಇದರ ಬಗ್ಗೆ ಚರ್ಚೆಗಳು ಆಗಬೇಕು. ಎಲ್ಲ ಪಕ್ಷ ಸೇರಿಸಿ ಸಮಿತಿ ಮಾಡಬೇಕು. ಚರ್ಚೆ ಮಾಡಿದ ಬಳಿಕ ಗೋ ಹತ್ಯೆ ನಿಷೇಧ ಕಾಯ್ದೆ ತರಬೇಕು ಎಂದರು.
Kshetra Samachara
11/12/2020 09:02 pm