ಹುಬ್ಬಳ್ಳಿ: ಎರಡು ಹಂತದ ಗ್ರಾಮ ಪಂಚಾಯತಿ ಚುನಾವಣೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ದೃಷ್ಟಿಯಿಂದಾಗಿ ನಾಳೆ ಸಂಜೆ 6 ಗಂಟೆಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ನಮ್ಮ ಗ್ರಾಮ ನಮ್ಮ ಶಕ್ತಿ ಕಾರ್ಯಕ್ರಮವನ್ನು ನಗರದ ಕಾರವಾರ ರಸ್ತೆಯಲ್ಲಿರುವ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಉದ್ಘಾಟಿಸಲಿದ್ದಾರೆ ಎಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಬಲಿಷ್ಠಗೊಳಿಸಲು ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ಹಾಗೂ ಮಾರ್ಗದರ್ಶನ ನೀಡಲು ಸಿದ್ಧರಾಮಯ್ಯ ಹಾಗೂ ಧಾರವಾಡ ಜಿಲ್ಲಾ ನಾಯಕರು ಪಣ ತೊಟ್ಟಿದ್ದೇವೆ ಎಂದರು.
ಧಾರವಾಡ ಜಿಲ್ಲೆಯಲ್ಲಿ 144 ಗ್ರಾಮ ಪಂಚಾಯತಿ ಚುನಾವಣೆ ಆರಂಭವಾಗಲಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 4 ಅಸೆಂಬ್ಲಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ ಅವರು, ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಐ.ಜಿ. ಸನದಿ, ಕಲಘಟಗಿ ಕ್ಷೇತ್ರಕ್ಕೆ ಸಂತೋಷ ಲಾಡ್ ಹಾಗೂ ನಾಗರಾಜ ಛಬ್ಬಿ ಹಾಗೂ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಅನುಪಸ್ಥಿತಿಯಲ್ಲಿ ಪ್ರಸಾದ ಅಬ್ಬಯ್ಯ, ಕುಂದಗೋಳ ಕ್ಷೇತ್ರಕ್ಕೆ ಕುಸುಮಾವತಿ ಶಿವಳ್ಳಿ ಅವರನ್ನು ಕೆಪಿಸಿಸಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ನಾಳಿನ ನಮ್ಮ ಗ್ರಾಮ ನಮ್ಮ ಶಕ್ತಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ, ಶಾಸಕರು, ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾ.ಪಂ. ಮುಖಂಡರು ಸೇರಿದಂತೆ ಮಹಿಳಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
Kshetra Samachara
10/12/2020 02:09 pm