ಧಾರವಾಡ: ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗಳು ಜರುಗುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಮುಕ್ತ ಮತದಾನ ನಡೆಸುವ ಉದ್ದೇಶದಿಂದ ಚುನಾವಣಾ ಸಮಯದಲ್ಲಿ ಜಿಲ್ಲೆಯಲ್ಲಿಯ ಗ್ರಾಮಾಂತರ ವ್ಯಾಪ್ತಿಯ ಆಯುಧ ಹೊಂದಿದ ಲೈಸೆನ್ಸ್ ದಾರರು ತಮ್ಮ ಆಯುಧಗಳನ್ನು, ಶಸ್ತ್ರಾಸ್ತ್ರಗಳನ್ನು ತಕ್ಷಣ ತಮ್ಮ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶಿಸಿದ್ದಾರೆ.
ಗ್ರಾಮಾಂತರ ವ್ಯಾಪ್ತಿಯ ಎಲ್ಲಾ ಲೈಸೆನ್ಸ್ ಹೊಂದಿರುವ ಆಯುಧಗಳನ್ನು ಜೊತೆಗಿಟ್ಟುಕೊಂಡು ತಿರುಗಾಡುವುದನ್ನು ನಿಷೇಧಿಸಿದೆ.
ಲೈಸೆನ್ಸ್ ದಾರರು ಹೊಂದಿರುವ ಆಯುಧಗಳನ್ನು ಠೇವಣಿ ಮಾಡಿದ ಬಗ್ಗೆ ಅಗತ್ಯ ಸ್ವೀಕೃತಿ ಪತ್ರ ನೀಡಲು ಮತ್ತು ಚುನಾವಣೆ ಪ್ರಕ್ರಿಯೆಯು ಮುಗಿದು ಫಲಿತಾಂಶ ಹೊರಬಿದ್ದ ಒಂದು ವಾರದ ನಂತರ ಸಂಬಂಧಿಸಿದವರಿಗೆ ಆಯುಧವನ್ನು ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾ ದಂಡಾಧಿಕಾರಿಗಳು ನಿರ್ದೇಶಿಸಿದ್ದಾರೆ.
ಈ ಆದೇಶ ಸರ್ಕಾರಿ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿ, ಸಿಬ್ಬಂದಿಯವರಿಗೆ ಅನ್ವಯಿಸುವುದಿಲ್ಲ ಹಾಗೂ ಬ್ಯಾಂಕ್ ಹಾಗೂ ಖಾಸಗಿ ಸಂಸ್ಥೆಗಳ ಸುರಕ್ಷತೆಗಾಗಿ ರಾಷ್ಟ್ರೀಕೃತ ಅಥವಾ ಸಂಸ್ಥೆಯ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ.
ಈ ಆದೇಶ ಉಲ್ಲಂಘಿಸಿದವರನ್ನು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಾಯ್ದೆ 1973 ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕೆಳಗೆ ದಂಡನೆಗೆ ಗುರಿಪಡಿಸಲಾಗುವುದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
Kshetra Samachara
07/12/2020 09:34 pm