ಧಾರವಾಡ: ರಾಜ್ಯದ ಆರೋಗ್ಯ ಸೇವೆಯಲ್ಲಿ ಗುಣಾತ್ಮಕವಾಗಿ ಅಮೂಲಾಗ್ರ ಬದಲಾವಣೆಗೆ ಚಿಂತಸಲಾಗಿದ್ದು, ಉತ್ತರ ಕರ್ನಾಟಕದ ಡಿಮಾನ್ಸ್ ಆಸ್ಪತ್ರೆಯನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯೊಂದಿಗೆ ಸಂಯೋಜಿಸಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಮತ್ತು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಶೀಘ್ರ ಮುಂಬಡ್ತಿ ಹಾಗೂ ಅವರ ವೇತನ ಹೆಚ್ಚಳ ಮಾಡಲು ಚಿಂತಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಹೇಳಿದರು.
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ನಿರ್ಮಿಸಿರುವ ಬೇಂದ್ರೆ ಬ್ಲಾಕ್ ನೂತನ ಕಟ್ಟಡ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸ್ಥಾಪಿಸಿರುವ ಪೂರ್ಣ ಶರೀರದ ಸಿಟಿ ಸ್ಕ್ಯಾನ್ ಯಂತ್ರ ಹಾಗೂ ಗಣಕೀಕೃತ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕರ್ನಾಟಕಕಕ್ಕೆ ನಿಮಾನ್ಸ್ ಇರುವಂತೆ ಉತ್ತರ ಕರ್ನಾಟಕಕ್ಕೆ ಡಿಮಾನ್ಸ್ ಇದೆ. ಇದರ ಉನ್ನತೀಕರಣದಿಂದ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳ ಜನರಿಗೆ ಉತ್ತಮವಾದ ಮಾನಸಿಕ ಆರೋಗ್ಯ ಚಿಕಿತ್ಸೆ ಲಭ್ಯವಾಗಲಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಆಸಕ್ತಿ ವಹಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಏಮ್ಸ್ ಆಸ್ಪತ್ರೆಯನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದು, ಏಮ್ಸ್ ನಂತಹ ಉನ್ನತ ಆರೋಗ್ಯ ಸಂಸ್ಥೆಗಳು ಈ ಭಾಗಕ್ಕೆ ಬರುವುದರಿಂದ ಇಲ್ಲಿನ ಆರೋಗ್ಯ ಸಮಸ್ಯೆಗಳ ಪರಿಹಾರದೊಂದಿಗೆ ಆರೋಗ್ಯವಂತ ಸಮಾಜ ರೂಪುಗೊಳ್ಳಲು ಸಹಕಾರಿಯಾಗುತ್ತದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಧಾರವಾಡದ ಡಿಮಾನ್ಸ್ ಸಂಸ್ಥೆಯು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಬಿಡುಗಡೆಯಾದ ಅನುದಾನವನ್ನು ಕಡಿಮೆ ಅವಧಿಯಲ್ಲಿ ಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ರಾಷ್ಟ್ರದಲ್ಲಿಯೇ ಪ್ರಥಮವಾಗಿದೆ ಎಂದರು.
Kshetra Samachara
21/11/2020 09:37 pm