ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ತಮಗೆ ಬೆಂಬಲ ಸೂಚಿಸಿದ್ದು ಮತ್ತಷ್ಟು ಬಲ ಬಂದಂತಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.
ಕ್ಷೇತ್ರದ ಹಾವೇರಿ, ಗದಗ ಸೇರಿದಂತೆ ವಿವಿಧೆಡೆ ಶುಕ್ರವಾರ ಪ್ರಚಾರ ನಡೆಸಿದ ಅವರು, ಈಗಾಗಲೇ ಕ್ಷೇತ್ರದ ಪದವೀಧರರಿಂದ ಬೆಂಬಲ ದೊರೆತಿದ್ದು ಪೂರಕವಾಗಿ ಜೆಡಿಎಸ್ ಸಹ ತಮ್ಮ ಜೊತೆಗಿರುವುದು ಗೆಲುವಿಗೆ ಸಹಕಾರಿ ಆಗಲಿದೆ. ಮತದಾರರ ಒಲವು ತಮಗಿದ್ದು ಪ್ರಥಮ ಪ್ರಾಶಸ್ತ್ಯದ ಮತ ತಮಗೇ ನೀಡುತ್ತಾರೆಂಬ ಭರವಸೆ ಹೊಂದಿರುವುದಾಗಿ ಹೇಳಿದರು.
ಈಗಾಗಲೇ ಶಿಕ್ಷಕರ ಸಂಘಟನೆಯಲ್ಲಿ ಪಳಗಿರುವ ತಾವು ಯಾವುದೇ ಜವಾಬ್ದಾರಿ ವಹಿಸಿದರೂ ಕಾಯಾ, ವಾಚಾ ಮನಸಾ ನಿರ್ವಹಿಸುತ್ತೇನೆ ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಕಳೆದ ಮೂರು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಪರಿಗಣಿಸಿ ಪದವೀಧರ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಅವಕಾಶ ಒದಗಿಸಿದರೆ ತಮ್ಮ ಎಲ್ಲ ರೀತಿಯ ಸಂಕಷ್ಟಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಕರ, ನೌಕರರ, ನಿರುದ್ಯೋಗಿ ಪದವೀಧರರ ಸಾಕಷ್ಟು ಸಮಸ್ಯೆಗಳ ಬಗ್ಗೆ ಈಗ ಅಧ್ಯಯನ ಮಾಡಿದ್ದು ಅವುಗಳಿಗೆ ಪರಿಹಾರ ನೀಡುವುದೇ ನನ್ನ ಪ್ರಥಮ ಆದ್ಯತೆ ಎಂದರು.
ನಂತರ ಗುರಿಕಾರ ಅವರು ಹಾವೇರಿ ಜಿಲ್ಲೆ ಮತ್ತು ಹುಬ್ಬಳ್ಳಿಯ ಪಿ.ಸಿ. ಜಾಬೀನ ಕಾಲೇಜಿನಲ್ಲಿ ಮತಯಾಚಿಸಿದರು. ಕ್ಷೇತ್ರದ ನಾಲ್ಕೂ ಜಿಲ್ಲೆಗಳ ಪ್ರತಿ ತಾಲೂಕುಗಳಲ್ಲಿ ತಲಾ ಒಂದು ತಂಡಗಳು ಗುರಿಕಾರ ಪರವಾಗಿ ಪ್ರಚಾರ ನಡೆಸಿದವು.
Kshetra Samachara
23/10/2020 07:51 pm