ಧಾರವಾಡ: ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಘಟಕ ಧಾರವಾಡ ಇವರ ಸಹಯೋಗದಲ್ಲಿ ಎಪ್ರಿಲ್ 21 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ಧಾರವಾಡ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡ್ರ ತಿಳಿಸಿದರು.
ಅವರು ಇಂದು ಬೆಳಿಗ್ಗೆ ಸರಕಾರಿ ನೌಕರ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ಸೇವಾ ದಿನದ ಅಂಗವಾಗಿ ಕೇಂದ್ರ ಸರಕಾರ ಪ್ರತಿ ವರ್ಷ ನಾಗರಿಕ ಸೇವಾ ದಿನವನ್ನು ಆಚರಿಸುತ್ತದೆ.
ಅದರಂತೆ ರಾಜ್ಯದಲ್ಲಿಯೂ ರಾಜ್ಯ ಸರಕಾರದ ಸೇವೆ ಗುರುತಿಸಿ, ಪ್ರೋತ್ಸಾಹ ನೀಡಲು ರಾಜ್ಯ ಸರಕಾರಿ ನೌಕರ ದಿನವನ್ನು ರಾಜ್ಯ ಸರಕಾರದಿಂದ ಪ್ರತಿ ವರ್ಷ ಆಚರಿಸುವಂತೆ ಕ್ರಮ ಕೈಗೊಳ್ಳಲು ಸಂಘದ ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನೇತೃತ್ವದಲ್ಲಿ ಎಲ್ಲ ಜಿಲ್ಲಾಧ್ಯಕ್ಷರು, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಒತ್ತಾಯಿಸಲಾಗಿತ್ತು. ಅದರಂತೆ ರಾಜ್ಯ ಸರಕಾರವು ಪ್ರತಿ ವರ್ಷ ಏಪ್ರಿಲ್ 21 ರಂದು ರಾಜ್ಯ ಸರಕಾರಿ ನೌಕರ ದಿನವನ್ನು ಆಚರಿಸಲು ಅಂದಿನ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಜನವರಿ 18, 2021 ರಂದು ಆದೇಶ ಹೊರಡಿಸಿದ್ದರು. ಇಂದಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಆದೇಶವನ್ನು ಕಾರ್ಯಗತಗೊಳಿಸಿದ್ದಾರೆ. ರಾಜ್ಯ ಸರಕಾರದಿಂದಲೇ ರಾಜ್ಯ ಸರಕಾರಿ ನೌಕರ ದಿನ ಆಚರಿಸುತ್ತಿರುವ ಈ ಕಾರ್ಯಕ್ರಮ ರಾಷ್ಟ್ರದಲ್ಲಿಯೆ ಪ್ರಥಮವಾಗಿದೆ ಎಂದು ಅವರು ಹೇಳಿದರು.
ವಿವಿಧ ಸರಕಾರಿ ಇಲಾಖೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ಗುರುತಿಸಿ ಸತ್ಕರಿಸುವ ಮತ್ತು ಅವರನ್ನು ಪ್ರೋತ್ಸಾಹಿಸಲು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದಿಂದ ನೀಡುವ ಪ್ರಸಕ್ತ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಇದೇ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಪ್ರದಾನ ಮಾಡಲಿದ್ದಾರೆ ಮತ್ತು ಇನ್ನು ಮುಂದೆ ಪ್ರತಿ ವರ್ಷ ಇದೇ ಕಾರ್ಯಕ್ರಮದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡ್ರ ತಿಳಿಸಿದರು.
Kshetra Samachara
18/04/2022 07:57 pm