ಧಾರವಾಡ: ಜನಗಣತಿ ಇಲಾಖೆ ಮೂಲಕ ಮಾದರಿ ದಾಖಲಾತಿ ಸಮೀಕ್ಷೆ ಮಾಡಿ ಸಂಗ್ರಹಿಸುವ ದತ್ತಾಂಶಗಳು ಮಹಿಳೆ ಮತ್ತು ಶಿಶುಗಳ ಆರೋಗ್ಯ ಅಭಿವೃದ್ಧಿಗಾಗಿ ನಿರೂಪಿಸುವ ಸರ್ಕಾರದ ನೀತಿ, ನಿಯಮಗಳಿಗೆ ಆಧಾರವಾಗುತ್ತವೆ, ಸಮೀಕ್ಷೆ ನಿಖರವಾಗಿ ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಹೇಳಿದರು.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತದ ಮಹಾ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತರ ಕಚೇರಿಯ ಬೆಂಗಳೂರು ಶಾಖೆಯಿಂದ ಗಣತಿದಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕಿಯರಿಗೆ ಆಯೋಜಿಸಿದ್ದ ಮಾದರಿ ದಾಖಲಾತಿ ಸಮೀಕ್ಷೆಗಾಗಿ ಮೊಬೈಲ್ ಆ್ಯಪ್ ಬಳಕೆ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನನ ಮತ್ತು ಮರಣ ದರ ದಾಖಲಿಸುವಲ್ಲಿ (ಎಸ್ಆರ್ ಎಸ್) ಮಾದರಿ ದಾಖಲಾತಿ ಸಮೀಕ್ಷೆ ಮಹತ್ವದ್ದಾಗಿದೆ.
ಜನನ ಮತ್ತು ಮರಣಗಳ ವ್ಯತ್ಯಾಸಗಳನ್ನು ತಿಳಿದು ಅದಕ್ಕೆ ಪರಿಹಾರಾತ್ಮಕ ಕ್ರಮಗಳನ್ನು ರೂಪಿಸಲು ನಿಖರ ದತ್ತಾಂಶಗಳು ಬೇಕಾಗುತ್ತವೆ.
ಸಮೀಕ್ಷೆ ಜವಾಬ್ದಾರಿ ಹೊಂದಿರುವ ಅಂಗನವಾಡಿ ಕಾರ್ಯಕರ್ತರು ಮತ್ತು ಶಿಕ್ಷಕಿಯರು ಮೊದಲು ನಿಗದಿತ ನಮೂನೆಗಳಲ್ಲಿ ಜನನ, ಮರಣ ಮಾಹಿತಿ ದಾಖಲಿಸುತ್ತಿದ್ದರು. ಈಗ ಕೇಂದ್ರ ಜನಗಣತಿ ಆಯುಕ್ತರ ಕಚೇರಿಯಿಂದ ಸಮೀಕ್ಷೆಗಾಗಿ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಅದರ ಬಳಕೆಗಾಗಿ ತರಬೇತಿ ನೀಡಲಾಗುತ್ತಿದೆ.
ಆ್ಯಪ್ ಮೂಲಕ ದಾಖಲಿಸುವುದರಿಂದ ನಿಖರ ಫಲಿತಾಂಶ ಸೀಗುತ್ತದೆ ಎಂದು ಅವರು ಹೇಳಿದರು.
ಮಹಿಳೆಯರ ಮರಣ ದರ, ಶಿಶುಗಳ ಮರಣ ದರ ಮತ್ತು ಮಹಿಳೆಯರ ಫಲವತ್ತತೆ ದರ ಕಂಡು ಹಿಡಿಯಲು ಈ ಸಮೀಕ್ಷೆ ಮಾಡಲಾಗುತ್ತದೆ. ಈ ಸಮೀಕ್ಷೆಯ ದತ್ತಾಂಶಗಳು ಮಹಿಳೆ ಮಕ್ಕಳ ಅಭಿವೃದ್ಧಿಗೆ ಪೂರಕವಾದ ನೀತಿ, ನಿರೂಪಣೆ ಮಾಡಲು ಸಹಕಾರಿ ಆಗುತ್ತವೆ. ಸಮೀಕ್ಷೆದಾರರು ನಿಖರ ಸಮೀಕ್ಷೆ ಮಾಡಿ, ದತ್ತಾಂಶ ದಾಖಲಿಸಬೇಕು ಎಂದು ಅವರು ಹೇಳಿದರು.
ಧಾರವಾಡ, ಗದಗ, ಬೆಳಗಾವಿ, ಹಾವೇರಿ ಮತ್ತು ಉತ್ತರ- ಕನ್ನಡ ಜಿಲ್ಲೆಯ ವಿವಿಧ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿಯರು, ಸಹ ಶಿಕ್ಷಕಿಯರು ಕಾರ್ಯಾಗಾರದಲ್ಲಿ ಭಾಗವಹಿಸಿ, ಮೊಬೈಲ್ ಆ್ಯಪ್ ಬಳಕೆ ತರಬೇತಿ ಪಡೆದರು.
Kshetra Samachara
10/08/2022 09:33 pm